ಸಿಕ್ಕಿಂನ 14,000 ಅಡಿ ಎತ್ತರದಲ್ಲಿರುವ ಚೀನಾ-ಭಾರತ ಗಡಿಗೆ ಭೇಟಿ ನೀಡಿದ ಆಂಟೋನಿ ಅವರಿಗೆ ನಮ್ಮ ರಾಷ್ಟ್ರದ ಸೈನಿಕರಿಂದಲ್ಲದೇ ಗಡಿಯಾಚೆಗಿನ ನೆರೆದೇಶದ ಸೈನಿಕರಿಂದಲೂ ಹೃತ್ಪೂರ್ವಕ ಸ್ವಾಗತ ಸಿಕ್ಕಿತು.
ಭಾರತದ ಗಡಿಯಿಂದ ಚೀನದ ಗಡಿಯಾಚೆ ವೀಕ್ಷಿಸಿದ ಆಂಟೊನಿ ನಮ್ಮ ಮೂಲಸೌಲಭ್ಯಕ್ಕೆ ಹೋಲಿಸಿದರೆ ಅವರ ಮೂಲಸೌಲಭ್ಯ ಅಭಿವೃದ್ಧಿ ಮೇಲ್ಮಟ್ಟದಲ್ಲಿದೆ ಎಂದು ಶ್ಲಾಘಿಸಿದರು. ಬೀಜಿಂಗ್‌ನಲ್ಲಿ ಡಿಸೆಂಬರ್ ಮಧ್ಯಾವಧಿಯಲ್ಲಿ ಭಾರತ-ಚೀನಾ ಮಿಲಿಟರಿ ಅಭ್ಯಾಸಗಳು ನಡೆಯುವುದಕ್ಕೆ ಮುನ್ನ ದ್ವಿಪಕ್ಷೀಯ ಬಾಂಧವ್ಯದಲ್ಲಿ ಮಹತ್ವದ ಬೆಳವಣಿಗೆ ಸಾಧಿಸಿರುವ ಭಾರತಕ್ಕೆ ಇದೊಂದು ರೀತಿ ಎಚ್ಚರಿಕೆಯ ಕರೆಯಾಗಿದೆ.
ಭಾರತದ ಕಡೆ ದುರಸ್ತಿಕಾಣದ ಮುಕ್ಕಾದ ರಸ್ತೆಗಳಿದ್ದರೆ ಗಡಿಯಾಚೆ ಚೀನಾದ ನುಣುಪಾದ ರಸ್ತೆಗಳು ಮೂಲಸೌಲಭ್ಯವನ್ನು ಭಾರತ ಸುಧಾರಿಸಬೇಕೆಂದು ಸಾರಿ ಹೇಳುತ್ತಿತ್ತು. ನಾವು ಸೇನಾಪಡೆಗಳಲ್ಲದೇ ಆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಕೂಡ ಮೂಲಸೌಲಭ್ಯ ಸುಧಾರಿಸಬೇಕು ಎಂದು ಆಂಟೋನಿ ನುಡಿದರು.ಭಾರತ ಮತ್ತು ಚೀನದ ನಡುವೆ ವ್ಯಾಪಾರಕ್ಕೆ ಒಳ್ಳೆಯ ಆರಂಭ ಸಿಕ್ಕಿದೆ.
ಮುಂದಿನ ವರ್ಷಗಳಲ್ಲಿ ವ್ಯಾಪಾರ ಮತ್ತಷ್ಟು ವಿಸ್ತರಣೆಯಾಗುವುದು ಖಚಿತ ಎಂದು ಅವರು ನುಡಿದರು. ಭಾರತ-ಚೀನಾ ಗಡಿಯಲ್ಲಿ ರಕ್ಷಣಾ ಸಚಿವರ ಚೊಚ್ಚಲ ಭೇಟಿಯಿಂದ ಮೂಲಸೌಲಭ್ಯ ಅಭಿವೃದ್ಧಿಯತ್ತ ಭಾರತದ ಕಣ್ಣುತೆರೆಸಿದೆ. ಮುಂದಿನ ದಿನಗಳಲ್ಲಿ ಗಡಿ ಪ್ರದೇಶಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಭಾರತ ಸರ್ಕಾರ ಒತ್ತುನೀಡುವುದು ಖಚಿತವಾಗಿದೆ.
|