ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆರೋಪಗಳಿಗೆ ಭಾನುವಾರ ಪ್ರತಿಕ್ರಿಯಿಸಿರುವ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವು ಸಾವಿನ ಸರದಾರರೊಂದಿಗೆ ಅನ್ಯೋನ್ಯತೆ ಹೊಂದಿರುವ ಹಳೆಯ ಪಕ್ಷ ಎಂದು ಟೀಕಿಸಿದರು.
ಸಂಸತ್ ಭವನದ ಮೇಲೆ ದಾಳಿ ಪ್ರಕರಣದ ಮುಖ್ಯ ಸಂಚುಗಾರ ಅಫ್ಜಲ್ ಗುರುಗೆ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ್ದರೂ ಯುಪಿಎ ಸರ್ಕಾರ ಕಳೆದ ಒಂದೂವರೆ ವರ್ಷದಿಂದ ಅಫ್ಜಲ್‌ನನ್ನು ಗಲ್ಲಿಗೆ ಹಾಕದೇ ಮೀನಮೇಷ ಎಣಿಸುತ್ತಿದೆ ಎಂದು ಅವರು ಚುನಾವಣೆ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. ಇದಕ್ಕೆ ಮುಂಚೆ ಸೋನಿಯಾ ಗಾಂಧಿ ನವಸಾರಿ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುತ್ತಾ, ಮೋದಿ ಸರ್ಕಾರವನ್ನು ಸಾವಿನ ಸರದಾರರರೆಂದು ಬಣ್ಣಿಸಿದ್ದರು.
ಅಫ್ಜಲ್ ಗುರುವಿನಂಥ ಭಯೋತ್ಪಾದಕನನ್ನು ರಕ್ಷಿಸಲು ಸರ್ಕಾರ ಏಕೆ ಪ್ರಯತ್ನಿಸುತ್ತಿದೆ ಎಂದು ಪ್ರಶ್ನಿಸಿದ ಮೋದಿ ಈ ನಿದರ್ಶನವು ಸಾವಿನ ವ್ಯಾಪಾರಿಗಳು ಯಾರು ಎಂಬುದನ್ನು ತೋರಿಸುತ್ತದೆ. ನಾನು ಈ ಸಾವಿನ ವ್ಯಾಪಾರಿಗಳ ವಿರುದ್ಧ ಹೋರಾಡುತ್ತಿದ್ದರೆ ಕಾಂಗ್ರೆಸ್ ಅವರಿಗೆ ಬೆಂಬಲವಾಗಿ ನಿಂತಿದೆ ಎಂದು ನುಡಿದರು. ಗುಜರಾತನ್ನು ಗೋಡ್ಸೆ ನೆಲ ಎಂದು ಸೋನಿಯಾ ಕರೆದಿದ್ದಾರೆ.
ಇದು ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಭಾಯಿ ಪಟೇಲ್ ಹುಟ್ಟಿನ ನೆಲ. ಈ ನೆಲವನ್ನು ಗೋಡ್ಸೆ ನೆಲ ಎಂದು ಕರೆಯುವುದು ರಾಜ್ಯದ ಮಹಾನ್ ಪರಂಪರೆಗೆ ಅವಹೇಳನ ಮಾಡಿದಂತೆ ಎಂದು ಹೇಳಿದ ಅವರು , ಗುಜರಾತಿನ ಜನರು ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠವನ್ನು ಕಲಿಸುತ್ತಾರೆಂದು ಹೇಳಿದರು.
|