ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ತಮ್ಮ ಸಾಲ ಮರು ವಸೂಲಿಗಾಗಿ ಗೂಂಡಾಗಳ ನೆರವು ಪಡೆಯುವಂತಹ ಕಾರ್ಯಕ್ಕೆ ಮುಂದಾಗಬಾರದೆಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಸಾಲಗಾರರಿಂದ ಬ್ಯಾಂಕ್‌ಗಳು ಹಣ ವಸೂಲಿ ಮಾಡುವುದಕ್ಕೆ ವ್ಯವಸ್ಥಿತ ಸ್ವರೂಪ ನೀಡುವ ಕುರಿತು ಮಸೂದೆಗೆ ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕಾರ ನೀಡಿದ ಸಂದರ್ಭದಲ್ಲಿ ಚಿದಂಬರಂ ಈ ವಿಷಯ ತಿಳಿಸಿದ್ದಾರೆ.
ಬ್ಯಾಂಕ್‌ಗಳು ಸಾಲವನ್ನು ವಸೂಲಿ ಮಾಡಲು ಗೂಂಡಾಗಳನ್ನು ಹಚ್ಚಿಸುವ ಬದಲಿಗೆ ನ್ಯಾಯಾಲಯಗಳ ಮೋರೆ ಹೋಗಲಿ ಎಂದವರು ತಮ್ಮ ಸಲಹೆಯನ್ನು ನೀಡಿದರು.
ಒಂದು ವೇಳೆ, ಗೂಂಡಾಗಳಿಂದ ಬಲವಂತದಿಂದಾಗಿ ಹಣ ವಸೂಲಿ ಮಾಡಿದ ಪ್ರಕರಣಗಳು ಕಂಡುಬಂದರೆ ಅಂತಹ ಬ್ಯಾಂಕ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಕಳೆದ ವಾರವಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ಸಹ ಪ್ರಮುಖ ಖಾಸಗಿ ಬ್ಯಾಂಕ್‌ಗಳಿಗೆ ಈ ಕುರಿತು ಎಚ್ಚರಿಕೆ ನೀಡಿ, ರಿಕವರಿ ಏಜೆಂಟ್ ನೇಮಕ ಕ್ರಮ ಸರಿಯಾದದ್ದು. ಆದರೆ, ಬಲವಂತದಿಂದಾಗಿ ಸಾಲ ವಸೂಲಿ ಮಾಡುವುದು ತಪ್ಪು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
|