ಶ್ರೀನಗರ ರಾಜಭವನ್‌ನಲ್ಲಿ ನಿಯೋಜಿಸಲಾಗಿದ್ದ ಗಡಿ ಭದ್ರತಾ ಪಡೆಯ ಯೋಧನೊಬ್ಬ ಮಂಗಳವಾರ ನಸುಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 97ನೇ ತುಕಡಿಯ ರವಿ ರಂಜನ್ ಎಂಬ ಯೋಧ ತನ್ನ ಸೇವಾ ಆಯುಧದಿಂದ ಸ್ವತಃ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಳಿಕ ಬಿಗಿಭದ್ರತೆಯ ರಾಜಭವನದಲ್ಲಿ ಭಯದ ವಾತಾವರಣ ಆವರಿಸಿತು ಎಂದು ಮೂಲಗಳು ಹೇಳಿವೆ.
ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಮುಂಚೆಯೇ ಅಸುನೀಗಿದ ಎಂದು ಮೂಲಗಳು ತಿಳಿಸಿದ್ದು. ಇಂತಹ ಕ್ರಮವನ್ನು ತೆಗೆದುಕೊಂಡ ಕಾರಣ ತಿಳಿದುಬಂದಿಲ್ಲ ಎಂದು ಹೇಳಿವೆ.ಕಣಿವೆಯಲ್ಲಿ ಉಗ್ರಗಾಮಿ ಚಟುವಟಿಕೆ ವಿರುದ್ಧ ಕಾರ್ಯನಿರತವಾಗಿರುವ ಭದ್ರತಾ ಪಡೆಗಳ ನಡುವೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರವೃತ್ತಿಯು ಇನ್ನೂ ಮುಂದುವರಿದಿದೆ.
ಮಾನಸಿಕ ಒತ್ತಡ ನಿವಾರಣೆಗೆ ಯೋಗಾ ಮತ್ತು ಜೀವನ ವಿಧಾನದ ಬಗ್ಗೆ ಯೋಧರಿಗೆ ಪರಿಚಯಿಸಿದ್ದರೂ ಇದು ಅವ್ಯಾಹತವಾಗಿ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದು ವರ್ಷದಲ್ಲಿ 25ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲವು ಹಿರಿಯ ಸೇನಾಧಿಕಾರಿಗಳು ಸೇರಿದಂತೆ ಸುಮಾರು 12 ಮಂದಿ ಅವರ ಸಹೋದ್ಯೋಗಿಗಳಿಂದಲೇ ಹತ್ಯೆಗೆ ಈಡಾಗಿದ್ದಾರೆ. ಕೌಟುಂಬಿಕ ವಿವಾದ ಮತ್ತು ಸೇವಾ ಪರಿಸ್ಥಿತಿ ಈ ಸಾವಿಗೆ ಮುಖ್ಯ ಕಾರಣಗಳಾಗಿವೆ ಎಂದು ಮೂಲಗಳು ಹೇಳಿವೆ.
|