ರಾಮೇಶ್ವರಕ್ಕೆ ಹೋದರೂ ಶನೀಶ್ವರನ ಕಾಟ ತಪ್ಪಲಿಲ್ಲ ಎನ್ನುವ ಗಾದೆ ಮಾತಿನಂತೆ ಅಪಹರಣಕಾರರ ಕಪಿಮುಷ್ಠಿಯಿಂದ ಬಾಲಕನೊಬ್ಬ ತಪ್ಪಿಸಿಕೊಂಡು ನಾಲ್ಕು ವರ್ಷ ಕಳೆದಿದ್ದರೂ ತನ್ನ ತಂದೆತಾಯಿಗಳ ಜತೆ ಸೇರುವ ಅದೃಷ್ಟ ಈ ಬಾಲಕನಿಗೆ ಒದಗಿಬರದೇ ಶೋಷಣೆಯಿಂದ ಪಾರಾಗಲು ಅಲ್ಲಿಂದಿಲ್ಲಿಗೆ ಓಡುವುದೇ ಪರಿಪಾಠವಾಗಿದೆ.
ಅಧಿಕಾರಿಗಳ ನಿರಾಸಕ್ತಿಯೋ ಅಥವಾ ಬಾಲಕನ ವಿಧಿಯೋ ಈಗಲೂ ನಿರ್ಗತಿಕ ಬಾಳನ್ನು ಅವನು ಬದುಕುತ್ತಿದ್ದಾನೆ. ಪಾಟ್ನಾದ ಫೂಲ್ವಾರಿ ಶರೀಫ್‌ನ ನಿವಾಸಿಯಾಗಿದ್ದ ಈ 12 ವರ್ಷ ಪ್ರಾಯದ ಬಾಲಕ ಶೋಷಣೆಯಿಂದ ಪಾರಾಗಲು ಒಂದು ಕಡೆಯಿಂದ ಇನ್ನೊಂದು ಕಡೆ ಓಡುವುದೇ ಕಸುಬಾಗಿದೆ.
ಅಂತಿಮವಾಗಿ ಉತ್ತರಪ್ರದೇಶ ಬುಲಂಡ್‌ಶಹರ್‌ನ ಕಪಿಲ್ ಭಾರದ್ವಾಜ್ ಅವರನ್ನು ಅವರನ್ನು ಭೇಟಿ ಮಾಡಿದಾಗಲೇ ಅವನಿಗೆ ಸುರಕ್ಷಿತ ನೆಲೆ ಸಿಕ್ಕಿತು. ಹಸಿವಿನಿಂದ ಕಂಗೆಟ್ಟ, ಚಿಂದಿ ಬಟ್ಟೆ ತೊಟ್ಟ ಬಾಲಕ ಕಳೆದ ಹೋದ ತನ್ನ ಪೋಷಕರನ್ನು ಹುಡುಕುತ್ತಾ ನಾಲ್ಕು ವರ್ಷ ಕಳೆದನೆಂಬ ವಿಷಯವನ್ನು ಕೇಳಿ ಕಪಿಲ್‌ಗೆ ಆಘಾತವಾಯಿತು. ಈ ಬಾಲಕ ಪುನಃ ಬೇರೆಯವರ ಕಪಿಮುಷ್ಠಿಗೆ ಸಿಕ್ಕರೆ ಕಷ್ಟವೆಂದು ಭಾವಿಸಿ ಅವನನ್ನು ಮನೆಗೆ ಕರೆತಂದು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾಗಿ ಕಪಿಲ್ ಭಾರದ್ವಾಜ್ ಹೇಳಿದರು.
ತನ್ನ ತಂದೆ ರೈಲ್ವೆಯಲ್ಲಿ ಚಾಲಕರಾಗಿದ್ದು ಅವರ ಹೆಸರು ದಿಲೀಪ್ ಚೌಧರಿ ಮತ್ತು ತಾಯಿ ಪಾಟ್ನಾದಲ್ಲಿ ವಕೀಲೆ ಎಂದು ಬಾಲಕ ಹೇಳುತ್ತಿದ್ದು, ಬಿಹಾರ ಪೊಲೀಸರು ಅದನ್ನಿನ್ನೂ ದೃಢೀಕರಿಸಿಲ್ಲ. ಕಪಿಲ್ ಮತ್ತು ಅವರ ಹಿರಿಯ ಸೋದರ ಬಾಲಕನ ಯೋಗಕ್ಷೇಮ ನೋಡುತ್ತಿದ್ದಾರೆ.
ಪಾಟ್ನಾದಲ್ಲಿ ತಾನಿದ್ದ ಸ್ಥಳವನ್ನು ಬಾಲಕ ನೆನಪಿಸಿಕೊಂಡು ಹೇಳಿದ ಬಳಿಕ ಸ್ಥಳೀಯ ಶಾಸಕರಿಗೆ. ಪೊಲೀಸರಿಗೆ ಮತ್ತಿತರರಿಗೆ ಮನವಿ ಸಲ್ಲಿಸಿದ್ದೆಲ್ಲವೂ ನಿಷ್ಫಲವಾಗಿದೆ.
|