ವಿವಾದಾತ್ಮಕ ಪೋಸ್ಕೊ ಯೋಜನೆ ಬಗ್ಗೆ ಸರ್ವ ಪಕ್ಷಗಳ ಸಭೆ ಕರೆಯುವಂತೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಬುಧವಾರ ಒತ್ತಾಯಿಸಿದೆ. ಕುಜಾಂಗ್‌ನಲ್ಲಿರುವ ಯೋಜನಾ ಪ್ರದೇಶವನ್ನು ಪೊಲೀಸರು, ಮಾಫಿಯಾ ಮತ್ತು ಹೊರಗಿನವರು ಅಕ್ರಮವಾಗಿ ವಶಕ್ಕೆ ತೆಗೆದುಕೊಂಡಿದ್ದಾರೆಂದು ಪಕ್ಷ ಟೀಕಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಸಿಪಿ ರಾಜ್ಯ ನಾಯಕ ಅಶೋಕ್ ದಾಸ್, ದಕ್ಷಿಣ ಕೊರಿಯ ಉಕ್ಕಿನ ದೈತ್ಯ ಕಂಪೆನಿ ಪೋಸ್ಕೊದ ಯೋಜನೆಗೆ ಸ್ಥಳೀಯರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅವರ ಪ್ರಜಾಪ್ರಭುತ್ವ ನಡೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಪೊಲೀಸರು ಈ ಪ್ರದೇಶದಲ್ಲಿ ಭಯಭೀತ ವಾತಾವರಣ ಮೂಡಿಸಿದ್ದು, ಪ್ರತಿಭಟನೆ ದಮನಕ್ಕೆ ಪೋಸ್ಕೊ ವಿರೋಧಿಗಳನ್ನು ಗುರಿಮಾಡುತ್ತಿದ್ದಾರೆಂದು ಅವರು ಟೀಕಿಸಿದರು. ಅಲ್ಲಿ ನಿಯೋಜಿಸಿರುವ ಪೊಲೀಸ್ ಪಡೆಗಳನ್ನು ಹಿಂದಕ್ಕೆ ತೆಗದುಕೊಳ್ಳದಿದ್ದರೆ ದಿಂಕಿಯ, ಗಡಕುಜಾಂಗ್ ಮತ್ತು ನುವಾಗಾವ್‌ನ ಪರಿಸ್ಥಿತಿ ಇನ್ನೊಂದು ನಂದಿಗ್ರಾಮದಂತೆ ಆಗುತ್ತದೆ ಎಂದು ದಾಸ್ ಎಚ್ಚರಿಸಿದರು.
ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಪಶ್ಚಿಮಬಂಗಾಳದ ತನ್ನ ಸಹೋದ್ಯೋಗಿಯಿಂದ ಪಾಠ ಕಲಿಯಬೇಕು ಎಂದು ತಿಳಿಸಿದ ಎನ್‌ಸಿಪಿ ನಾಯಕ ಯೋಜನೆಗೆ ಭೂಮಿ ವಶಪಡಿಸಿಕೊಳ್ಳುವ ಮುನ್ನ ಸರ್ವ ಪಕ್ಷಗಳ ಸಭೆ ಕರೆಯಬೇಕೆಂದು ಆಗ್ರಹಿಸಿದರು. ಯೋಜನೆಯಲ್ಲಿ ಸಂತ್ರಸ್ತರಾಗುವ ಜನರ ಜತೆ ಸಮಾಲೋಚಿಸಿದೇ ಸುಪ್ರೀಂಕೋರ್ಟ್ ಮತ್ತು ಕೇಂದ್ರ ಸರ್ಕಾರದ ಮಾರ್ಗದರ್ಶನಗಳನ್ನು ಸರ್ಕಾರ ಉಲ್ಲಂಘಿಸುತ್ತಿದೆ ಎಂದು ಅವರು ಆರೋಪಿಸಿದರು.
|