ಬೌಗೋಳಿಕ ರಾಜಕೀಯ ಸನ್ನಿವೇಶದ ಕಾರಣದಿಂದ ಅಣ್ವಸ್ತ್ರ ಪರೀಕ್ಷೆ ಮಾಡಬೇಕಾದ ಅಗತ್ಯ ಕಂಡುಬಂದರೆ ಪರೀಕ್ಷೆ ಮಾಡುವುದಾಗಿ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ತಿಳಿಸಿದರು. ರಾಜ್ಯಸಭೆಯಲ್ಲಿ ಮಂಗಳವಾರ ವಿವಾದಾತ್ಮಕ ಪರಮಾಣು ಒಪ್ಪಂದದ ಚರ್ಚೆಯ ಬಗ್ಗೆ ಅವರು ಉತ್ತರಿಸುತ್ತಾ ಮೇಲಿನಂತೆ ತಿಳಿಸಿದರು.
ಭಾರತ ಅಣುಪರೀಕ್ಷೆ ನಡೆಸಲು ನಿರ್ಧರಿಸಿದ ಪಕ್ಷದಲ್ಲಿ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನುಡಿದರು. ಭಾರತವು ಸಾರ್ವತ್ರಿಕ ನಿಶ್ಯಸ್ತ್ರೀಕರಣಕ್ಕೆ ಬದ್ಧವಾಗಿದ್ದು, ಅಣ್ವಸ್ತ್ರ ಶಸ್ತ್ರೀಕರಣದಲ್ಲಿ ನಂಬಿಕೆಯಿರಿಸಿಲ್ಲ. ಪರಮಾಣು ಒಪ್ಪಂದವನ್ನು ಸಮರ್ಥಿಸಿಕೊಂಡ ಅವರು, ಹೈಡ್ ಕಾಯ್ದೆಯು ಕೆಲವು ಆದೇಶದ ಮತ್ತು ಬಾಹ್ಯವಿಷಯಗಳನ್ನು ಹೊಂದಿದ್ದು ಭಾರತ ಅದಕ್ಕೆ ಬದ್ಧವಾಗಿಲ್ಲ ಎಂದು ನುಡಿದರು.
ಏತನ್ಮಧ್ಯೆ, ಪರಮಾಣು ಒಪ್ಪಂದದ ಬಗ್ಗೆ ತಮಗೆ ಮನವರಿಕೆಯಾಗಲಿಲ್ಲ ಎಂದು ಹೇಳಿ ಬಿಜೆಪಿ,ಎಡಪಕ್ಷ ಮತ್ತು ಸಮಾಜವಾದಿ ಪಕ್ಷದ ಸದಸ್ಯರು ರಾಜ್ಯಸಭೆಯಲ್ಲಿ ಸಭಾತ್ಯಾಗ ಮಾಡಿದರು.
ನಿನ್ನೆ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪ್ರಧಾನಿ ಮನಮೋಹನ ಸಿಂಗ್ ಎಂದಿನಂತಿರದೇ ವ್ಯಗ್ರರಾಗಿ ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹಾ ಮೇಲೆ ದಾಳಿ ಮಾಡಿದ್ದರು. ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಹೇಳಿದ ಪ್ರಧಾನಿ ವಿತ್ತಸಚಿವರಾಗಿ ಟೋಕಿಯೊಗೆ ಪ್ರವಾಸ ತೆರಳಿದ್ದಾಗ ಜಪಾನಿನ ಸಹೋದ್ಯೋಗಿಯ ಭೇಟಿಗೆ ಅವರಿಗೆ ಅವಕಾಶ ನೀಡದಿದ್ದನ್ನು ವ್ಯಂಗ್ಯವಾಗಿ ಹೇಳಿದರು.
ಇದಕ್ಕೆ ಪ್ರತ್ಯುತ್ತರವಾಗಿ ಸರ್ಕಾರದ ಮೇಲೆ ಆರೋಪ ಮಾಡಿದ ಸಿನ್ಹಾ ಕೂಡಂಕುಲಂನಲ್ಲಿ ನಾಲ್ಕು ಅಣುಶಕ್ತಿ ಸ್ಥಾವರಗಳನ್ನು ಸ್ಥಾಪಿಸುವ ರಷ್ಯಾ ಜತೆ ಒಪ್ಪಂದಕ್ಕೆ ಅಮೆರಿಕದ ಒತ್ತಡದಿಂದ ಸಹಿ ಹಾಕಲಿಲ್ಲವೆಂದು ನುಡಿದರು.
|