ಸಮಾಜದ ವೃದ್ಧ ವ್ಯಕ್ತಿಗಳನ್ನು ಅವರ ಮಕ್ಕಳು ಅಥವಾ ಬಂಧುಗಳು ನೋಡಿಕೊಳ್ಳುವುದನ್ನು ಖಾತರಿ ಮಾಡುವ ಇಲ್ಲದಿದ್ದರೆ ದಂಡ ಕಟ್ಟುವುದನ್ನು ಎದುರಿಸಬೇಕಾದ ಮಸೂದೆಗೆ ಲೋಕಸಭೆ ಗುರುವಾರ ಅನುಮೋದನೆ ನೀಡಿದೆ. ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಕಾಯ್ದೆ 2007ರ ಪ್ರಕಾರ ಮಕ್ಕಳು ಮತ್ತು ಬಂಧುಗಳು ತಮ್ಮ ತಂದೆ, ತಾಯಿಗಳು ಮತ್ತು ವೃದ್ಧ ಬಂಧುಗಳ ಪೋಷಣೆ ಮಾಡುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ ಪ್ರತಿ ಗ್ರಾಮದಲ್ಲಿ ಸ್ಥಾಪಿಸಿದ ನ್ಯಾಯಮಂಡಳಿಯನ್ನು ಹಿರಿಯರು ಸಂಪರ್ಕಿಸಬಹುದು.
ತಮ್ಮ ವಯಸ್ಸಾದ ಬಂಧುಗಳ ಆಸ್ತಿ ಅನುವಂಶಿಕವಾಗಿ ಪಡೆಯುವ ವ್ಯಕ್ತಿಗಳು ಬಂಧುಗಳನ್ನು ಪೋಷಣೆ ಮಾಡುವ ಕರ್ತವ್ಯಕ್ಕೆ ಬದ್ಧರಾಗಿರಲು ಮತ್ತು ಅಶಕ್ತ ವಯಸ್ಸಾದ ವ್ಯಕ್ತಿಗಳಿಗೆ ನಿರ್ವಹಣೆ ಒದಗಿಸಲು ವೃದ್ಧಾಪ್ಯ ಗೃಹಗಳನ್ನು ನಿರ್ಮಿಸುವ ನಿಯಮಗಳನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುತ್ತಾ ಸಾಮಾಜಿಕ ನ್ಯಾಯ ಮತ್ತು ಅಧಿಕಾರ ಖಾತೆ ಸಚಿವೆ ಮೀರಾಕುಮಾರ್ ಲೋಕಸಭೆಯಲ್ಲಿ ಹೇಳಿದರು.
ನ್ಯಾಯಮಂಡಳಿಗೆ ಉಪ ವಿಭಾಗೀಯ ದರ್ಜೆಯ ಅಧಿಕಾರಿ ಅಧ್ಯಕ್ಷತೆ ವಹಿಸಿದ್ದು, ಕಲ್ಯಾಣ ಅಧಿಕಾರಿ ಕೂಡ ಇರುತ್ತಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಅಪೀಲು ಅಧಿಕಾರಿಯಾಗಿರುತ್ತಾರೆ. ಅರ್ಜಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥ ಮಾಡಲಾಗುತ್ತದೆ ಮತ್ತು ರಾಜಿಗೆ ಮಹತ್ವ ನೀಡಲಾಗುತ್ತದೆ ಎಂದು ಸಚಿವೆ ಹೇಳಿದರು.
ಪೋಷಕರು ನ್ಯಾಯಮಂಡಳಿಯನ್ನು ಸ್ವತಃ ಸಂಪರ್ಕಿಸಬಹುದು ಅಥವಾ ಅವರ ಪರವಾಗಿ ಬೇರೆಯವರು ಸಂಪರ್ಕಿಸಬಹುದು ಎಂದು ಹೇಳಿದ ಅವರು ವೃದ್ಧ ವ್ಯಕ್ತಿಗಳ ಜೀವ ಮತ್ತು ಆಸ್ತಿಪಾಸ್ತಿ ರಕ್ಷಣೆಗೆ ಸೂಕ್ತ ವ್ಯವಸ್ಥೆ ನಿರ್ಮಿಸಲು ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.
|