ಮಲೇಶಿಯದಲ್ಲಿ ಹತ್ಯೆಯಾಗಿದ್ದಾರೆಂದು ಶಂಕಿಸಲಾದ 22 ವರ್ಷ ವಯಸ್ಸಿನ ವ್ಯಕ್ತಿಯ ದೇಹವನ್ನು ತರಲು ವಿಫಲವಾದ ಬಗ್ಗೆ ಮಧುರೈ ಹೈಕೋರ್ಟ್ ಗುರುವಾರ ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ನಿಂದನಾ ನೋಟಿಸ್ ಜಾರಿ ಮಾಡಿದೆ. ಬಿಸ್ಕೆಟ್ ಕಾರ್ಖಾನೆಯ ಕಾರ್ಮಿಕನಾದ ಸುಸೀಂದ್ರನ್ ಸೇತುರಾಜಾ ಮಲೇಶಿಯದಲ್ಲಿ ಜನವರಿ 2007ರಲ್ಲಿ ಸತ್ತಿದ್ದು, ಆಗಿನಿಂದ ಅವನ ದೇಹವನ್ನು ಶವಾಗಾರದಲ್ಲಿ ಇಡಲಾಗಿದೆ.
ಆದರೆ ಅವರ ಕುಟುಂಬ ಸುಸೀಂದ್ರನ್‌ನನ್ನು ಹತ್ಯೆ ಮಾಡಲಾಗಿದೆಯೆಂದು ದೂರಿದ್ದಾರೆ. ಕಾರ್ಖಾನೆಯ ಮಾಲೀಕರ ಮಗಳನ್ನು ಪ್ರೇಮಿಸಿದ್ದ ಸುಸೀಂದ್ರ ಅದಕ್ಕೆ ತನ್ನ ಜೀವವನ್ನೇ ತೆತ್ತಿದ್ದಾನೆಂದು ಅವರು ಹೇಳಿದ್ದಾರೆ. ಮಾಲೀಕರು ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರೆಂದು ಸುಸೀಂದ್ರನ್ ದೂರವಾಣಿ ಮಾಡಿದ್ದನು. ಅದಾದ ಮೇಲೆ ಅವನು ಉದ್ಯೋಗವನ್ನು ಬದಲಿಸಿದರೂ ಕೂಡ ಅವರು ಕೊಂದರು ಎಂದು ಸುಸೀಂದ್ರನ್ ಸೋದರ ಸತ್ಯೇಂದ್ರನ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸುಸೀಂದ್ರನ್ ದೇಹವನ್ನು ವಾಪಸು ತರುವಂತೆ ಪುನಃ ಪುನಃ ಮನವಿ ಸಲ್ಲಿಸಿದ್ದರೂ ವಿದೇಶಾಂಗ ಸಚಿವಾಲಯ ಏನನ್ನೂ ಮಾಡಲಿಲ್ಲ. ಹತಾಶರಾದ ಕುಟುಂಬ ಹೈಕೋರ್ಟ್ ಮೊರೆ ಹೋದ ಬಳಿಕ ಸೆಪ್ಟೆಂಬರ್‌ನಲ್ಲಿ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಮೂರು ವಾರಗಳೊಳಗೆ ಸುಸೀಂದ್ರನ್ ದೇಹ ತರುವಂತೆ ಸರ್ಕಾರಕ್ಕೆ ಆದೇಶಿಸಿತು.
ಇದಕ್ಕೆ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಕೋರ್ಟ್ ಸಚಿವಾಲಯಕ್ಕೆ ನಿಂದನಾ ನೋಟಿಸ್ ಜಾರಿಮಾಡಿದೆ. ನಾವು ಪತ್ರಿಕೆಗಳಿಂದ ಮಾತ್ರ ಇದನ್ನು ತಿಳಿಯಬೇಕಾಯಿತು. ದುಷ್ಕರ್ಮಿಗಳು ತಪ್ಪಿಸಿಕೊಂಡರೂ ಚಿಂತೆಯಿಲ್ಲ. ಅವನ ಅಂತ್ಯಕ್ರಿಯೆಗೆ ಮುನ್ನ ಒಂದು ಬಾರಿಯಾದರೂ ಅವನ ದರ್ಶನ ಮಾಡಬೇಕು ಎಂದು ಸತ್ಯೇಂದ್ರನ್ ಹೇಳಿದ್ದಾರೆ.
|