ನಂದಿಗ್ರಾಮದ ವಿಷಯದಲ್ಲಿ ಹಿನ್ನಡೆ ಅನುಭವಿಸಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಅವರು ಭಗವಾನ್ ರಾಮನ ಅಸ್ತಿತ್ವವನ್ನು ಪ್ರಶ್ನಿಸುವ ಮೂಲಕ ಇನ್ನೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ. ಬಾಬ್ರಿ ಮಸೀದಿಯ 15ನೇ ಕರಾಳ ದಿನಾಚರಣೆಯ ಅಂಗವಾಗಿ ಗುರುವಾರ ಸಭೆಯಲ್ಲಿ ಭಾಗವಹಿಸಿದ್ದ ಅವರು, ರಾಮನು ಕವಿಗಳ ಕಲ್ಪನೆಯ ಆಧಾರದ ಮೇಲೆ ಜನಿಸಿದ್ದು, ರಾಮ ಸೇತು ಸಮುದ್ರಗರ್ಭದಲ್ಲಿ ಸೈಸರ್ಗಿಕವಾಗಿ ನಿರ್ಮಿತವಾಗಿದೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಎಬ್ಬಿಸಿದ್ದಾರೆ.
"ಸೇತುಸಮುದ್ರಂ ಯೋಜನೆಯನ್ನು ಸಂಘಪರಿವಾರ ಧಾರ್ಮಿಕ ಆಧಾರದ ಮೇಲೆ ವಿರೋಧಿಸುತ್ತಿದೆ. ಆದರೆ ಆ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಅದು ಅತೀ ಮುಖ್ಯವಾಗಿದೆ" ಎಂದು ಅವರು ನುಡಿದರು. ಭಟ್ಟಾಚಾರ್ಜಿ ಪ್ರತಿಕ್ರಿಯೆಗೆ ಉತ್ತರಿಸಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಹುಲ್ ಸಿನ್ಹಾ ನಂದಿಗ್ರಾಮದ ಘಟನೆ ಬಳಿಕ ಮುಸ್ಲಿಂ ಮತಬ್ಯಾಂಕ್ ಓಲೈಕೆಯ ಪ್ರಯತ್ನವೆಂದು ಅವರು ನುಡಿದಿದ್ದಾರೆ.
ರಾಮ ನಂಬಿಕೆಯ ವಿಷಯವಾಗಿದ್ದು, ಕಮ್ಯುನಿಸ್ಟರು ಸದಾ ದೇವಮಾನವರನ್ನು ದ್ವೇಷಿಸುತ್ತಾರೆ. ಟಾಗೋರ್ ಮತ್ತು ವಿವೇಕಾನಂದ ವಿರುದ್ಧ ಕೂಡ ಅವರು ಅಪಪ್ರಚಾರ ಮಾಡುತ್ತಿದ್ದರು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ರಾಮನ ಅಸ್ತಿತ್ವದ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿ ವಿವಾದಕ್ಕೆ ಈಡಾದ ಕೆಲವು ತಿಂಗಳ ಬಳಿಕ ಭಟ್ಟಾಚಾರ್ಜಿ ಹೇಳಿಕೆ ಹೊರಬಿದ್ದಿದೆ.
|