ನಂದಿಗ್ರಾಮದ ಬಾಮನ್‌ಚಕ್ ಬಳಿ ಗುರುವಾರ 5 ಸಮಾಧಿಗಳಿಂದ ಹೊರತೆಗೆದ ಸುಟ್ಟ ಮೂಳೆಗಳು ಮತ್ತು ತಲೆಬುರುಡೆಯ ಭಾಗಗಳು ಯಾರದ್ದೆಂಬುದನ್ನು ಗುರುತಿಸಲು ಪಶ್ಚಿಮಬಂಗಾಳ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ಆದೇಶಿಸಲಾಗಿದೆ ಎಂದು ಗೃಹಕಾರ್ಯದರ್ಶಿ ಪ್ರಕಾಶ್ ರಂಜನ್ ರಾಯ್ ಸುದ್ದಿಗಾರರಿಗೆ ಇಲ್ಲಿ ತಿಳಿಸಿದರು.
ಅವಶೇಷಗಳ ಗುರುತು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ನುಡಿದ ಅವರು, ಮೂಳೆಯ ಮಾದರಿಗಳನ್ನು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗುವುದು ಎಂದು ಅವರು ನುಡಿದರು.
ಮೃತರನ್ನು ಗುರುತಿಸುವ ಉದ್ದೇಶದಿಂದ ಖೇಜುರಿಯಲ್ಲಿ ಸತ್ತವರ ಸಮೀಪ ಬಂಧುಗಳ ಡಿಎನ್‌ಎ ಮತ್ತು ಮೂಳೆಗಳ ಡಿಎನ್‌ಎ ನಡುವೆ ಹೋಲಿಕೆ ಮಾಡಲಾಗುವುದು ಎಂದು ರೇ ಹೇಳಿದರು. ಈ ಮೂಳೆಗಳು ಅ.8ರಂದು ಬಾಂಬ್‌ಗಳನ್ನು ತಯಾರು ಮಾಡುವಾಗ ಸತ್ತವರದ್ದು ಇರಬಹುದು. ಅಥವಾ ಮಾ.14ರಂದು ಸತ್ತವರದ್ದು ಅಥವಾ ನ.8ರಂದು ನಂದಿಗ್ರಾಮ ಮರುವಶ ಮಾಡುವ ಸಂದರ್ಭದಲ್ಲಿ ಸತ್ತವರದ್ದಿರಬಹುದು ಎಂದು ಮಿಡ್ನಾಪುರ ಪೊಲೀಸರು ಶಂಕಿಸಿದ್ದಾರೆ.
|