"ನೀವು ಸರ್ಕಾರಕ್ಕೆ ಪರವಾಗಿ ಇದ್ದರೆ ಸುರಕ್ಷಿತವಾಗಿರುತ್ತೀರಿ, ಸರ್ಕಾರಕ್ಕೆ ವಿರೋಧವಾಗಿದ್ದರೆ ದೇವರೇ ನಿಮ್ಮನ್ನು ಕಾಪಾಡಬೇಕು" ಎಂದು ಪ್ರಧಾನಿ ಮನಮೋಹನ ಸಿಂಗ್ ಗುಜರಾತಿನಲ್ಲಿ ಹಬ್ಬಿರುವ ಭೀತಿಯ ವಾತಾವರಣ ಉಲ್ಲೇಖಿಸಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ತಮ್ಮದೇ ಧಾಟಿಯಲ್ಲಿ ಟೀಕಿಸಿದರು.
ರಾಜ್ಯದಲ್ಲಿ ಮೂಡಿರುವ ಭಯಭೀತಿಯ ವಾತಾವರಣ ಇಡೀ ರಾಷ್ಟ್ರಕ್ಕೆ ಅಪಾಯಕಾರಿ ಎಂದು ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವ ಸಿಂಗ್ ಶುಕ್ರವಾರ ನುಡಿದರು. ಮಹಾತ್ಮ ಹುಟ್ಟಿದ ನಾಡಿನಲ್ಲಿ, ಹಿಂಸಾಚಾರದಲ್ಲಿ ನಂಬಿಕೆಯಿರುವ ಜನರು ಪುನಃ ಅಧಿಕಾರ ಬಯಸುತ್ತಿರುವುದು ವಿಷಾದನೀಯ ಎಂದು ಅವರು ಹೇಳಿದರು.
ನಾವು ಗುಜರಾತಿನ ಗ್ರಾಮಗಳ ಸ್ಥಿತಿಗತಿ ಬದಲಿಸಲು ಇಚ್ಛಿಸಿದ್ದೇವೆ. ಆ ಗ್ರಾಮಗಳನ್ನು ಅಭಿವೃದ್ಧಿಯ ಮಾದರಿಗಳಾಗಿ ಮಾಡುತ್ತೇವೆ ಎಂದು ಸಿಂಗ್ ಭರವಸೆ ನೀಡಿದರು. ಶಿಕ್ಷಣ ರಂಗದಲ್ಲಿ ಗುಜರಾತ್ ಹಿಂದುಳಿದಿದೆ. ಮೂರನೇ ಒಂದರಷ್ಟು ಜನರು ಇನ್ನೂ ಅನಕ್ಷರಸ್ಥರಾಗಿದ್ದಾರೆ.
ಗ್ರಾಮಗಳಲ್ಲದೇ ನಗರ ಕೇಂದ್ರಗಳೂ ಅಭಿವೃದ್ಧಿಯ ಮುಖ ಕಂಡಿಲ್ಲವೆಂದು ಅವರು ನುಡಿದರು. ಕೋರ್ಟ್‌ನಲ್ಲಿ ವಿಷಯ ಬಾಕಿವುಳಿದಿರುವಾಗಲೇ ಸೊಹ್ರಾಬುದ್ದೀನ್ ಎನ್‌ಕೌಂಟರ್ ವಿಷಯವನ್ನು ಕೆಲವರು ಕೆದಕಿದ್ದು ದುರದೃಷ್ಟಕರ ಎಂದು ಪರೋಕ್ಷವಾಗಿ ಮೋದಿಯನ್ನು ಉಲ್ಲೇಖಿಸಿ ಪ್ರಧಾನಿ ನುಡಿದರು. ಇಂದು ಎರಡು ಚಿಂತನೆಗಳ ನಡುವೆ ಸಂಘರ್ಷ ಆರಂಭವಾಗಿದೆ. ಗುಜರಾತ್ ರಾಜಕೀಯದ ಮುಖ್ಯವಾಹಿನಿಗೆ ಹಿಂತಿರುಗಬೇಕು. ಇಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದು ಗೋಚರಿಸುತ್ತಿದೆ ಎಂದು ನುಡಿದ ಪ್ರಧಾನಿ ಕಾಂಗ್ರೆಸ್ ಜಯಭೇರಿಯೊಂದಿಗೆ ಅಧಿಕಾರದ ಗದ್ದುಗೆ ಏರುತ್ತದೆ ಎಂದು ಆಶಾವಾದ ವ್ಯಕ್ತಪಡಿಸಿದರು.
|