ನವದೆಹಲಿಯ ಮೊದಲ ಟೆಸ್ಟ್ ಪಂದ್ಯ ಗೆದ್ದು ಒತ್ತಡವಿಲ್ಲದ ಆತ್ಮವಿಶ್ವಾಸದಿಂದ ಕಣಕ್ಕಿಳಿಯುವ ಭಾರತ ತಂಡ ಒಂದೆಡೆಯಾದರೆ, ಮೊದಲ ಟೆಸ್ಟ್ ಸೋತು, ಎರಡನೇ ಟೆಸ್ಟ್ ಡ್ರಾ ಮಾಡಿಕೊಂಡು, ಸರಣಿಯನ್ನು ಸಮ ಮಾಡಿಕೊಳ್ಳಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಪಾಕಿಸ್ತಾನ ತಂಡಗಳ ಮಧ್ಯೆ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ವೇದಿಕೆ ಸಂಪೂರ್ಣ ಸಜ್ಜುಗೊಂಡಿದ್ದು, ಶನಿವಾರ ಆರಂಭಗೊಳ್ಳಲಿದೆ.
ಭಾರತೀಯ ಕ್ರಿಕೆಟ್ ತಂಡದ ನಾಯಕ, ಜಂಬೋ ಅನಿಲ್ ಕುಂಬ್ಳೆ ಅವರ ನೇತೃತ್ವದಲ್ಲಿ ತವರು ನಾಡಿನಲ್ಲಿ ಮೊಟ್ಟಮೊದಲ ಟೆಸ್ಟ್ ಪಂದ್ಯವಾಡಲು ವೇದಿಕೆ ಸಜ್ಜಾಗಿದ್ದು, ಭಾರತ ಸಂಪೂರ್ಣ ಆತ್ಮವಿಶ್ವಾಸದಿಂದ ಬೀಗುತ್ತಿದೆ.
ಆದರೆ, ಸ್ಟಾರ್ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ್ ಸಿಂಗ್ ಧೋನಿ ಅವರ ಅನುಪಸ್ಥಿತಿ ತಂಡವನ್ನು ಆತಂಕದೆಡೆಗೆ ದೂಡಿದೆ.
ಏತನ್ಮಧ್ಯೆ, ಉದ್ಯಾನನಗರಿಯಲ್ಲಿ ಚಳಿ ಆಟಗಾರರನ್ನು ಬೆಚ್ಚಿ ಬಿಳಿಸಿದ್ದು, ವರುಣ ಅಡ್ಡಿ ಮಾಡುವ ಸಂಭವವು ಇಲ್ಲದಿಲ್ಲ ಎಂದು ಹವಮಾನ ತಜ್ಞರು ಹೇಳಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ನಿರಾಶೆ ಮೂಡಿಸಿದೆ.
ಏಕದಿನ ಸರಣಿ ಸೋತು ಗಾಯಗೊಂಡ ಹುಲಿಯಂತಾಗಿರುವ ಪಾಕ್ ತಂಡ, ಕನಿಷ್ಠ ಪಕ್ಷ ಈ ಪಂದ್ಯವನ್ನಾದರೂ ಗೆದ್ದು, ಮಾನ ಉಳಿಸಿಕೊಳ್ಳಬೇಕೆನ್ನುವ ಛಲದಿಂದ ಕಣಕ್ಕಿಳಿಯುವುದರಿಂದ, ಯಾವ ಹಂತದಲ್ಲಿ ತಿರುಗಿ ಬೀಳುತ್ತದೆ ಎಂದು ಹೇಳುವುದು ಕಷ್ಟ ಸಾಧ್ಯವೆಂದು ಕ್ರಿಕೆಟ್ ವಿಶ್ಲೇಷಕರ ಅಂಬೋಣವಾಗಿದೆ.
|