1987ರಲ್ಲಿ ಭಾರತ-ಶ್ರೀಲಂಕಾ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಎಲ್‌ಟಿಟಿಇ ಮುಖಂಡ ಪ್ರಭಾಕರನ್ ಅವರನ್ನು ಹತ್ಯೆ ಮಾಡುವಂತೆ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಆದೇಶ ನೀಡಿದ್ದರೆಂದು ಭಾರತ ಶಾಂತಿಪಾಲನಾ ಪಡೆಯ ಮಾಜಿ ಕಮಾಂಡರ್ ಪುಸ್ತಕವೊಂದರಲ್ಲಿ ಬರೆದಿದ್ದಾರೆ. ಆ ಸಂದರ್ಭದಲ್ಲಿ ಶ್ರೀಲಂಕಾದಲ್ಲಿ ಭಾರತದ ರಾಯಭಾರಿಯಾಗಿದ್ದ ಜೆ.ಎನ್. ದೀಕ್ಷಿತ್ ಈ ಸೂಚನೆಯನ್ನು ತಮಗೆ ಮುಟ್ಟಿಸಿದ್ದರೆಂದು ಅವರು ಪುಸ್ತಕದಲ್ಲಿ ತಿಳಿಸಿದ್ದಾರೆ.
"ನಾಳೆ ನೀವು ಪ್ರಭಾಕರನ್ ಅವರನ್ನು ಭೇಟಿ ಮಾಡುತ್ತಿದ್ದು ಅವರನ್ನು ಹತ್ಯೆ ಮಾಡಿ" ಎಂದು ಹೈಕಮೀಷನ್‌ನಿಂದ ತಮಗೆ ಕರೆ ಬಂದಿತೆಂದು ಪುಸ್ತಕದ ಕರ್ತೃ ಮೇ.ಜನರಲ್ ಹರ್ಕಿರತ್ ಸಿಂಗ್ ತಿಳಿಸಿದರು. ಸಿಂಗ್ ತಮ್ಮ ಮೇಲಾಧಿಕಾರಿಗಳನ್ನು ಸಂಪರ್ಕಿಸಿದ ಬಳಿಕ ಆದೇಶ ಪಾಲನೆಗೆ ನಿರಾಕರಿಸಿದರು.
ಹತ್ಯೆ ಮಾಡುವುದು ಸೇನೆಯ ವ್ಯವಹಾರವಲ್ಲ ಎಂದು ಆದೇಶ ನಿರಾಕರಿಸಲು ಅವರು ಕಾರಣ ನೀಡಿದ್ದರು. ನಮ್ಮದು ಸಂಪ್ರದಾಯವಾದಿ ಸೇನೆಯಾಗಿದ್ದು ಹಿಂದಿನಿಂದ ಗುಂಡು ಹಾರಿಸಿ ಕೊಲ್ಲುವುದು ನಮ್ಮ ಕಾಯಕವಲ್ಲ ಎಂದು ಅವರು ಉತ್ತರ ಕಳಿಸಿದ್ದರು.
|