ತಮಿಳುನಾಡು ತೀರದ ವಿವಾದಾತ್ಮಕ ಅಡಾಮ್ಸ್ ಬ್ರಿಡ್ಜ್ ಮಾನವ ನಿರ್ಮಿತವಾಗಿದ್ದು, ಪ್ರಾಚೀನ ಪುರಾಣ ಗ್ರಂಥವಾದ ರಾಮಾಯಣದಲ್ಲಿ ಪ್ರತಿಧ್ವನಿಸಿದೆ ಎಂದು ಕಳೆದ ವಾರ ಸಂಸತ್ತಿನಲ್ಲಿ ಮಂಡಿಸಿದ ಸರ್ಕಾರಿ ಪ್ರಕಟಣೆಯೊಂದು ತಿಳಿಸಿದೆ. ಭಾರತ ಮತ್ತು ಶ್ರೀಲಂಕಾ ನಡುವೆ ಪಾಲ್ಕ್ ಜಲಸಂಧಿಯಲ್ಲಿ ಪ್ರಾಚೀನ ಸೇತುವೆಯಿರುವುದನ್ನು ಉಪಗ್ರಹ ಚಿತ್ರಗಳು ಬಹಿರಂಗಮಾಡಿವೆ ಎಂದು ಹೈದರಾಬಾದ್ ಮೂಲದ ರಾಷ್ಟ್ರೀಯ ದೂರಸಂವೇದಿ ಸಂಸ್ಥೆ ಪ್ರಕಟಿಸಿದ ಇಮೇಜಸ್ ಇಂಡಿಯ ಎಂಬ ಪುಸ್ತಕದಲ್ಲಿ ತಿಳಿಸಲಾಗಿದೆ.
ಈ ಸೇತುವೆಯ ಮೂಲ ಮಾತ್ರ ನಿಗೂಢವಾಗಿದೆ. ಈ ಸೇತುವೆಯು 1,750,000 ವರ್ಷಗಳ ಹಿಂದಿನ ಪ್ರಾಚೀನ ಕಾಲದ್ದೆಂದು ಪುರಾತತ್ವ ಅಧ್ಯಯನ ಬಹಿರಂಗ ಮಾಡಿದೆ. ಈ ಸೇತುವೆಯ ರಚನೆಯು ಮಾನವ ನಿರ್ಮಿತ ಎನ್ನುವುದನ್ನು ಸ್ಟನಿಂಗ್ ಸ್ಟ್ರಚ್ಚರ್ಸ್ ಎಂಬ ಉಪನಾಮೆಯಿರುವ ಪುಸ್ತಕದ 39ನೇ ಪುಟದಲ್ಲಿ ತಿಳಿಸಲಾಗಿದೆ. ಇದು 30 ಕಿಮೀ ಉದ್ದದ ಸೇತುವೆಯಾಗಿದ್ದು, ಅಡಾಮ್ಸ್ ಬ್ರಿಡ್ಜ್ ಎಂದು ಹೆಸರು ಪಡೆದು ದಕ್ಷಿಣ ಭಾರತದ ರಾಮೇಶ್ವರಂನಿಂದ ಶ್ರೀಲಂಕಾವರೆಗೆ ವ್ಯಾಪಿಸಿದೆಯೆಂದು ಪುಸ್ತಕದಲ್ಲಿ ಹೇಳಲಾಗಿದೆ.
ಪ್ರಾಚೀನ ಪುರಾಣ ಗ್ರಂಥ ರಾಮಾಯಣದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಗ್ರಂಥದ ಪ್ರಕಾರ ಶ್ರೀಲಂಕಾವನ್ನು ತಲುಪಲು ಭಗವಾನ್ ರಾಮ ಮತ್ತು ಅವನ ಅನುಯಾಯಿಗಳು ಈ ಸೇತುವೆಯನ್ನು ನಿರ್ಮಿಸಿದರೆಂದು ಪುಸ್ತಕದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಇನ್ನೂ ಅಧ್ಯಯನ ಮುಂದುವರಿದಿದ್ದು, ಭಾರತದ ಪುರಾಣದ ಜತೆ ಸಖ್ಯವಿರುವ ಪ್ರಾಚೀನ ಇತಿಹಾಸಕ್ಕೆ ಇದು ಉದಾಹರಣೆಯೆಂದು ಭಾವಿಸಲಾಗಿದೆ.
ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಮುನ್ನಡಿಯಿರುವ ಈ ಪುಸ್ತಕದ ಉಲ್ಲೇಖವು ರಾಮಸೇತು ಬೃಹತ್ ಮರಳಿನ ಗಡ್ಡೆಗಳಿಂದ ನೈಸರ್ಗಿಕವಾಗಿ ನಿರ್ಮಿತವಾಗಿದೆಯೆಂಬ ಸರ್ಕಾರದ ಹೇಳಿಕೆಗೆ ತದ್ವಿರುದ್ಧವಾಗಿದೆ. ರಾಮಸೇತು ಅಥವಾ ಭಗವಾನ್ ರಾಮನ ಅಸ್ತಿತ್ವದ ಬಗ್ಗೆ ವೈಜ್ಞಾನಿಕ ಅಥವಾ ಐತಿಹಾಸಿಕ ಸಾಕ್ಷ್ಯಾಧಾರವಿಲ್ಲವೆಂಬ ಪುರಾತತ್ವ ಇಲಾಖೆಯ ವರಿದಿಗಳಿಗೆ ಕೂಡ ಇದು ತದ್ವಿರುದ್ಧವಾಗಿದೆ.
|