ಸೊಹ್ರಾಬುದ್ದೀನ್ ಕುರಿತ ನರೇಂದ್ರ ಮೋದಿ ಅವರ ಹೇಳಿಕೆಯಿಂದ ವ್ಯಾಪಕಟೀಕೆಗೆ ಗುರಿಯಾಗಿರುವ ಬಿಜೆಪಿ, ಕಾಂಗ್ರೆಸ್ ಮೇಲೆ ಪ್ರತಿ ವಾಗ್ದಾಳಿ ನಡೆಸಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಸಾವಿನ ಸರದಾರ ಎಂದು ಕರೆದರೆನ್ನಲಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಕ್ರಮ ಜರಗಿಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.
ಆದರೆ ಸೋನಿಯಾ ಅವರು ಸಾವಿನ ವ್ಯಾಪಾರಿ ಎಂಬ ಪದವನ್ನು ಮೋದಿಯನ್ನು ಉದ್ದೇಶಿಸಿ ಬಳಸಿದ್ದಲ್ಲ ಎಂದು ಇದೇ ವೇಳೆ ಕಾಂಗ್ರೆಸ್ ಪ್ರತಿಕ್ರಿಯಿಸಿದೆ. ವಿರೋಧಪಕ್ಷದ ನಾಯಕ ಎಲ್.ಕೆ.ಆಡ್ವಾಣಿ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿಯವರನ್ನು ಬಲವಾಗಿ ಸಮರ್ಥಿಸಿಕೊಂಡರು. ಮೋದಿ ಅವರಾಡಿದ ಮಾತು ಸೋನಿಯಾ ನೀಡಿದ ಹೇಳಿಕೆಗೆ ಪ್ರತ್ಯುತ್ತರವಾಗಿತ್ತು ಮತ್ತು ಅದನ್ನು ಭಯೋತ್ಪಾದನೆಯ ಹಿನ್ನೆಲೆಯಲ್ಲಿ ನೋಡಬೇಕು ಎಂದು ಹೇಳಿದರು.
ಸೋನಿಯಾ ಅವರನ್ನು ಕಟುವಾಗಿ ಟೀಕಿಸಿದ ಅವರು, ಮೋದಿ ವಿರುದ್ಧ ಸೋನಿಯಾ ಬಳಸಿರುವ ಸಾವಿನ ವ್ಯಾಪಾರಿ ಮತ್ತು ಅಪ್ರಾಮಾಣಿಕ ಮುಂತಾದ ಪದಗಳು ತೀರಾ ಆಕ್ಷೇಪಾರ್ಹವಾದುವು ಎಂದರಲ್ಲದೆ ಇಂತಹ ಮಾತುಗಳಿಗಾಗಿ ಕಾಂಗ್ರೆಸ್ ಚುನಾವಣೆಯಲ್ಲಿ ಭಾರೀ ಬೆಲೆ ತೆರಬೇಕಾದೀತು ಎಂದು ಎಚ್ಚರಿಸಿದರು.
ಕಾಂಗ್ರೆಸ್ ಅಧ್ಯಕ್ಷೆಯ ಹೇಳಿಕೆ ಕುರಿತು ಪಕ್ಷ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ ಮತ್ತು ಸೋನಿಯಾ ಅವರಿಗೆ ಇಷ್ಟರೊಳಗೆ ನೋಟಿಸ್ ನೀಡಲಾಗಿದೆಯೇ ಎಂದು ನಾನು ತಿಳಿಯ ಬಯಸುತ್ತೇನೆ. ಚುನಾವಣಾ ಆಯೋಗ ಇಬ್ಬಗೆ ಧೋರಣೆ ಅನುಸರಿಸಬಾರದು ಮತ್ತು ಉಭಯ ಪ್ರಕರಣಗಳಲ್ಲಿ ಏಕರೂಪದ ಕಾರ್ಯಶೈಲಿ ತೋರಬೇಕು ಎಂದು ಹೇಳಿದರು.
|