"ಇದು ನಗರದ ಎ ಗ್ರೇಡ್ ಭಾಗ ಮತ್ತು ಇದು ಬಿ ಗ್ರೇಡ್ ಭಾಗ. ಇದು ಸದಾ ಹಾಗೇ ಉಳಿದಿದೆ" ಎಂದು ಗುಜರಾತಿನ ಗೋಧ್ರಾ ನಿವಾಸಿ ಯಾಕುಬ್ ಅಲಿ ನಗರದ ಹಿಂದುಗಳು ವಾಸಿಸುವ ಪ್ರದೇಶದತ್ತ ಬೊಟ್ಟು ಮಾಡುತ್ತಾ ಉದ್ಗರಿಸಿದರು.
59 ಪ್ರಯಾಣಿಕರನ್ನು ಬಲಿತೆಗೆದುಕೊಂಡ ಸಾಬರಮತಿ ಎಕ್ಸ್ಪ್ರೆಸ್ ಅಗ್ನಿಅನಾಹುತದ ಹಿಂದೆಯೇ ಕೋಮುಹಿಂಸಾಚಾರ ಸಂಭವಿಸಿದ ಬಳಿಕ ಈಗ ಗೋಧ್ರಾ ಮೇಲೆ ಗಮನ ಕೇಂದ್ರೀಕೃತವಾಗಿದ್ದು, ಅಲ್ಲಿ ಮುಸ್ಲಿಮರು ಈಗಲೂ ಭಯಭೀತ ವಾತಾವರಣದಲ್ಲಿ ಅಭಿವೃದ್ಧಿಯ ಮುಖವನ್ನೇ ಕಾಣದೇ ಬದುಕು ನಡೆಸಿದ್ದಾರೆ. . ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ, ಮುಸ್ಲಿಮರು ಮತದಾನ ಮಾಡಲು ಕುತೂಹಲ ತಾಳಿದ್ದಾರೆಂದು ನಿರೀಕ್ಷಿಸಲಾಗಿದ್ದರೆ ಅದು ನಿಜವಲ್ಲ. "ಚುನಾವಣೆಯಿಂದ ನಮ್ಮಲ್ಲಿ ಯಾವ ಪರಿವರ್ತನೆಯೂ ಆಗುವುದಿಲ್ಲ. ಕಾಂಗ್ರೆಸ್ ಸೇರಿದಂತೆ ಯಾರೇ ರಾಜಕೀಯ ನಾಯಕರು ಇಲ್ಲಿಗೆ ಭೇಟಿ ಕೊಟ್ಟಿಲ್ಲ. ನಮ್ಮ ಪರವಾಗಿ ಕೆಲಸ ಮಾಡುವ ಭರವಸೆ ನೀಡುವವರಿಗೆ ಮಾತ್ರ ನಾವು ಮತ ಹಾಕುತ್ತೇವೆ ಎಂದು ಎಂದು ಸೆಲೂನ್ ಮಾಲೀಕ ಅನಿಯಾಝ್ ಹೇಳುತ್ತಾರೆ.
ಈಗ ಕೋಮುಭಾವನೆಗಳು ಶಮನವಾಗಿದ್ದರೂ, ಗೋಧ್ರಾ ಎರಡು ಭಾಗಗಳಾಗಿ ಸ್ಪಷ್ಟ ವಿಭಜನೆಯಾಗಿದೆ. ಒಂದು ಭಾಗ ಹಿಂದುಗಳಿಗೆ ಪಾರುಪತ್ಯವಾಗಿದ್ದರೆ ಇನ್ನೊಂದು ಭಾಗ ಮುಸ್ಲಿಮರದ್ದು.
ಅಭಿವೃದ್ಧಿ ಮತ್ತು ಅಭಿರುಚಿಗೆ ಸಂಬಂಧಿಸಿದಂತೆ ಇವೆರಡು ಪ್ರದೇಶಗಳು ಭಿನ್ನಸ್ವರೂಪದ್ದಾಗಿದೆ. ಮುಸ್ಲಿಮ್ ಪ್ರಾಬಲ್ಯದ ಪ್ರದೇಶ ಸಂಕುಚಿತ, ಕಿಕ್ಕಿರಿದ ಗಲ್ಲಿಗಳಿಂದ ಮತ್ತು ಸಣ್ಣ ಮನೆಗಳಿಂದ ಹಾಗೂ ಟಾರ್ ಹಾಕದ ರಸ್ತೆಗಳಿಂದ ಕೂಡಿದ್ದು, ಅಭಿವೃದ್ಧಿಯ ಮುಖವನ್ನೇ ಕಂಡಿಲ್ಲ.
|