ಗುವಾಹಟಿಯಿಂದ ದೆಹಲಿಗೆ ತೆರಳುತ್ತಿದ್ದ ಬ್ರಹ್ಮಪುತ್ರ ಮೇಲ್‌ನ 12 ಬೋಗಿಗಳು ನಿಜ್ಬಾರಿ ಬಳಿ ಭಾನುವಾರ ತಡರಾತ್ರಿಯಲ್ಲಿ ಹಳಿತಪ್ಪಿ ಒಬ್ಬರು ಸತ್ತಿದ್ದಾರೆ ಮತ್ತು 70 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಉತ್ತರಬಂಗಾಳ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿದ್ದು, ಕೆಲವರನ್ನು ಪ್ರಾಥಮಿಕ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆಯೆಂದು ಮೂಲಗಳು ಹೇಳಿವೆ.
ರಂಗಪಟ್ಟಿ ಮತ್ತು ನಿಜ್ಬಾರಿ ರೈಲ್ವೆ ನಿಲ್ದಾಣಗಳ ನಡುವೆ ಸುಮಾರು 12 ಬೋಗಿಗಳು ಹಳಿತಪ್ಪಿ ಅವುಗಳಲ್ಲಿ 5 ಬೋಗಿಗಳು ಹಳ್ಳವೊಂದಕ್ಕೆ ಬಿತ್ತೆಂದು ರೈಲ್ವೆ ಮೂಲಗಳು ಹೇಳಿವೆ. ಅಪಘಾತದಲ್ಲಿ ಒಂದು ಹವಾನಿಯಂತ್ರಿತ ಬೋಗಿಗೆ ತೀವ್ರ ಹಾನಿಯಾಗಿದೆ.
ಈಶಾನ್ಯ ರೈಲ್ವೆಯ ಮುಖ್ಯಕಚೇರಿಯ ಮೇಲಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದರು. ಗಾಯಾಳುಗಳನ್ನು ರಕ್ಷಿಸಲು ಸ್ಥಳೀಯರ ಜತೆ ಈಶಾನ್ಯ ಮುಂಚೂಣಿ ರೈಲ್ವೆ ಅಧಿಕಾರಿಗಳು ಸೇರಿಕೊಂಡರು. ಗಾಯಾಳುಗಳನ್ನು ಕರೆತರಲು ಹೊಸ ಜಲ್ಪೈಗುರಿ ನಿಲ್ದಾಣದಿಂದ ಪರಿಹಾರ ಕಾರ್ಯಾಚರಣೆ ರೈಲನ್ನು ಕಳಿಸಲಾಗಿದೆ.
1999ರ ಆ.1ರಂದು ಸಿಲಿಗುರಿಯಿಂದ 100 ಕಿಮೀ ದೂರದ ಗೈಸಾಲ್ ಬಳಿ ನಿಂತಿದ್ದ ಅವಧ್-ಅಸ್ಸಾಂ ಎಕ್ಸ್‌ಪ್ರೆಸ್ ರೈಲಿಗೆ ಬ್ರಹ್ಮಪುತ್ರ ಮೇಲ್ ಗಾಡಿ ಮುಖಾಮುಖಿ ಡಿಕ್ಕಿಹೊಡೆದು ಕನಿಷ್ಠ 400 ಪ್ರಯಾಣಿಕರು ಸತ್ತಿದ್ದರಿಂದ ಮುಖಪುಟದ ಸುದ್ದಿಯಾಗಿತ್ತು.
|