ಕೆಳ ಕೋರ್ಟ್‌ಗಳನ್ನು ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್ ಲಕ್ಷ್ಮಣರೇಖೆಯನ್ನು ದಾಟದಂತೆ ಎಚ್ಚರಿಸಿದೆ. ಕೆಳಕೋರ್ಟ್‌ಗಳು ಕಾನೂನನ್ನು ನಿರ್ಮಿಸಬಾರದು, ಬದಲಿಗೆ ಕಾನೂನನ್ನು ಜಾರಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹಿತವಚನ ನುಡಿದಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಬಗ್ಗೆ ಕೂಡ ಮಾತನಾಡಿದ ಕೋರ್ಟ್ ಪಿಐಎಲ್‌ಗಳಿಂದ ಸಮಯ ವ್ಯರ್ಥ ಎಂದು ಬಣ್ಣಿಸಿದೆ.
ಪಿಐಎಲ್‌ಗಳು ಹಣ ಮಾಡುವುದಕ್ಕೆ ಮಾತ್ರ ಅಸ್ತ್ರವಾಗಿದೆ ಎಂದು ಹೇಳಿದೆ. ನ್ಯಾಯಾಂಗ ಸಂಯಮವನ್ನು ಪ್ರದರ್ಶಿಸುವ ಅಗತ್ಯ ಈಗ ಉಂಟಾಗಿದ್ದು, ಶಾಸಕಾಂಗದ ಸೀಮೆಯೊಳಗೆ ನ್ಯಾಯಾಂಗ ಪ್ರವೇಶ ಮಾಡಬಾರದೆಂದು ಹೇಳಿದೆ. ಪಂಜಾಬ್ ಸರ್ಕಾರ ವಜಾ ಮಾಡಿದ ಟ್ರಾಕ್ಟರ್ ಚಾಲಕನ ಪ್ರಕರಣವನ್ನು ವಿಚಾರಣೆ ನಡೆಸುವಾಗ ಕೋರ್ಟ್ ಮೇಲಿನ ಕಟುವಾದ ಆದೇಶ ನೀಡಿದೆ.
ಚಾಲಕನನ್ನು ವಜಾ ಮಾಡಿದ ಬಳಿಕ ಅವನ ಸ್ಥಾನದಲ್ಲಿ ಇನ್ನೊಬ್ಬರು ನೇಮಕವಾಗಿರುವುದರಿಂದ ಅವರಿಗೆ ಹೊಸ ಹುದ್ದೆಯನ್ನು ಸೃಷ್ಟಿಸಿ ಮರುನೇಮಕ ಮಾಡಿಕೊಳ್ಳಬೇಕೆಂದು ಪಂಜಾಬ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್ ಕಾನೂನುಗಳನ್ನು ಸೃಷ್ಟಿಸುವುದು ಕೋರ್ಟ್ ಕೆಲಸವಲ್ಲ. ಬದಲಿಗೆ ಅವುಗಳನ್ನು ಜಾರಿಗೆ ತರುವುದು ಅದರ ಕೆಲಸ ಎಂದು ತಿಳಿಸಿತು.
ನರ್ಸರಿ ಪ್ರವೇಶದ ಬಗ್ಗೆ ದೆಹಲಿ ಹೈಕೋರ್ಟ್ ಆದೇಶಗಳು, ರಾಜಧಾನಿಯಲ್ಲಿ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಮತ್ತು ನಗರದಲ್ಲಿ ಸ್ಪೀಡ್‌ಬ್ರೇಕರ್ ತೆಗೆಯುವುದು ಮುಂತಾದ ಇತ್ತೀಚಿನ ಕೆಲವು ಕೋರ್ಟ್ ತೀರ್ಪುಗಳಿಗೆ ಕೂಡ ಸುಪ್ರೀಂಕೋರ್ಟ್ ಪ್ರತಿಕ್ರಿಯಿಸಿತು. ನರ್ಸರಿ ಶಾಲೆಗಳಿಗೆ ಮಕ್ಕಳನ್ನು ಹೇಗೆ ಸೇರಿಸುತ್ತಾರೆಂದು ತಪಾಸಣೆ ಮಾಡುವುದು ಕೋರ್ಟ್ ಜವಾಬ್ದಾರಿಯಲ್ಲ ಎಂದು ನುಡಿಯಿತು.
ಸುಪ್ರೀಂಕೋರ್ಟ್ ಕೆಳಕೋರ್ಟ್‌ಗಳ ಅಧಿಕಾರ ವ್ಯಾಪ್ತಿಯ ಬಗ್ಗೆ ಎಚ್ಚರಿಕೆ ನೀಡಿರುವುದು ಇದೇ ಪ್ರಥಮ ಬಾರಿಯಾಗಿದೆ.
|