ಬಿಜೆಪಿಯ ವರ್ಚಸ್ವಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಮೇಲುಗೈನಿಂದ ಸುಮಾರು ಒಂದು ದಶಕಗಳಿಂದ ಅಧಿಕಾರದ ಕಾಯ್ದಿರಿಸಿದ ಕೋಣೆಯಲ್ಲಿ ಕಾಯುತ್ತಾ ಕುಳಿತಿದ್ದ ಲಾಲ್ ಕೃಷ್ಣ ಆಡ್ವಾಣಿ ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ.
ಕೊನೆಗೂ ಅವರನ್ನು 2009ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಹೆಸರಿಸುವ ಮೂಲಕ ಅವರಲ್ಲಿ ಸುಪ್ತವಾಗಿದ್ದ ಕನಸು ನನಸಾಗುತ್ತಿದೆ. ಇಲ್ಲಿ ಸಭೆ ಸೇರಲಿರುವ ಸಂಸದೀಯ ಮಂಡಳಿಯಲ್ಲಿ ಈ ಬಗ್ಗೆ ಔಪಚಾರಿಕ ಪ್ರಕಟಣೆ ಹೊರಬೀಳಲಿದೆ. ಬಿಜೆಪಿಯ ಪ್ರಮುಖ ಮುಖಂಡರು ಮತ್ತು ವಿಎಚ್‌ಪಿ ಹಾಗೂ ಆರ್ಎಸ್‌ಎಸ್ ನಾಯಕರ ನಡುವೆ ಉನ್ನತ ಸ್ತರದ ಮಾತುಕತೆಯ ಬಳಿಕ ಈ ನಿರ್ಧಾರಕ್ಕೆ ಬರಲಾಯಿತೆಂದು ವರದಿಯಾಗಿದೆ.
2009ರ ಚುನಾವಣೆ ಇನ್ನೂ ಬಹುದೂರದಲ್ಲಿದ್ದರೂ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಯುಪಿಎಗೆ ಎಡಪಕ್ಷಗಳ ಬೆದರಿಕೆಯಿಂದಾಗಿ ಸರ್ಕಾರ ಉರುಳಿಬೀಳುವುದೆಂಬ ನಿರೀಕ್ಷೆಯಲ್ಲಿ ಬಿಜೆಪಿ ತರಾತುರಿಯಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಹೆಸರಿಸಿದೆಯೆಂದು ಕಾಣುತ್ತಿದೆ.
ಈ ನಿರ್ಧಾರವು ವಿಧಾನಸಭೆ ಚುನಾವಣೆಗೆ ಇಳಿದಿರುವ ಗುಜರಾತಿನ ಮತದಾರರನ್ನು ಸೆಳೆದುಕೊಳ್ಳುವ ತಂತ್ರವೂ ಆಗಿದೆಯೆಂದು ವಿಶ್ಲೇಷಿಸಲಾಗುತ್ತಿದೆ. ಬಿಜೆಪಿಯ ಹಿರಿಯ ತಲೆಮಾರಿನ ನಾಯಕ ವಾಜಪೇಯಿ ಸಕ್ರಿಯ ರಾಜಕಾರಣಕ್ಕೆ ಹಿಂತಿರುಗಲು ತೋರಿಸುತ್ತಿರುವ ಅನಾಸಕ್ತಿ ಮತ್ತು ಎರಡನೇ ತಲೆಮಾರಿನ ನಾಯಕರಲ್ಲಿ ವಾಜಪೇಯಿ ಅವರಿಗೆ ಹೋಲಿಕೆ ಮಾಡುವಂತ ಸ್ಥಾನದಲ್ಲಿ ಯಾರೂ ಇಲ್ಲದಿರುವುದರಿಂದ ಪಕ್ಷದಲ್ಲಿ ಉತ್ತರಾಧಿಕಾರದ ಪ್ರಶ್ನೆ ಉದ್ಬವಿಸಿರುವುದು ಆಡ್ವಾಣಿ ಅವರನ್ನು ಹೆಸರಿಸಲು ಕಾರಣವೆಂದು ಹೇಳಲಾಗಿದೆ.
|