ಸಿಪಿಐನ ಮಾವೋವಾದಿ ಗುಂಪಿನ ಶಸ್ತ್ರಸಜ್ಜಿತ ನಕ್ಸಲೀಯರು ಬಸ್ತಾರ್ ಜಿಲ್ಲೆಯಲ್ಲಿ ಪೊಲೀಸ್ ಠಾಣೆಯೊಂದರ ಮೇಲೆ ಮುತ್ತಿಗೆ ಹಾಕಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಕೊಂದು ಒಬ್ಬರನ್ನು ತೀವ್ರವಾಗಿ ಗಾಯಗೊಳಿಸಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಅತ್ಯಾಧುನಿಕ ಶಸ್ತ್ರಗಳಿಂದ ಸಜ್ಜಿತರಾದ ಮಾವೋವಾದಿಗಳು ಇಲ್ಲಿಗೆ 240 ಕಿಮೀ ದೂರದ ಬಿಶ್ರಾಮ್‌ಪುರ ಪೊಲೀಸ್ ಠಾಣೆಯ ಮೇಲೆ ಬುಧವಾರ ರಾತ್ರಿ ದಾಳಿ ಮಾಡಿದರು.
ಮೂರು ನೆಲಬಾಂಬ್‌ಗಳನ್ನು ಸಿಡಿಸಿದ್ದಲ್ಲದೇ ಒಂದೇ ಸಮನೆ ನಕ್ಸಲೀಯರು ಗುಂಡುಹಾರಿಸಿದ್ದರಿಂದ ಮೂವರು ಪೊಲೀಸರು ಸ್ಥಳದಲ್ಲೇ ಸತ್ತರು ಮತ್ತು ಪೇದೆಯೊಬ್ಬ ಗಾಯಗೊಂಡಿದ್ದಾನೆಂದು ಉನ್ನತ ಪೊಲೀಸ್ ಅಧಿಕಾರಿಗಳು ಬಸ್ತಾರ್‌ನಿಂದ ವರದಿ ಮಾಡಿದ್ದಾರೆ. ಸತ್ತವರಲ್ಲಿ ಒಬ್ಬರು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಮುಖ್ಯಪೇದೆಗಳು ಸೇರಿದ್ದಾರೆಂದು ಬಸ್ತಾರ್ ವಲಯದ ಇನ್ಸ್‌ಪೆಕ್ಟರ್ ಜನರಲ್ ತಿಳಿಸಿದರು.
ನಕ್ಸಲರು ನಾಲ್ಕು ಜೀಪ್‌ಗಳು ಮತ್ತು ಮೋಟರ್‌ಸೈಕಲ್‌ಗಳಲ್ಲಿ ಆಗಮಿಸಿ ಪೊಲೀಸ್ ಠಾಣೆಗಳ ಬಳಿಯಿರುವ ಅಂಗಡಿಮಾಲೀಕರಿಗೆ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದ ಬಳಿಕ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿದರು. ದಾಳಿಗೆ ಮುಂಚೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಒಳಕ್ಕೆ ಪ್ರವೇಶಿಸಲು ಒಂದೇಸಮನೇ ಗುಂಡು ಹಾರಿಸಿದರು.
ಒಂದೊಮ್ಮೆ ಪೊಲೀಸ್ ಠಾಣೆಯೊಳಗೆ ಪ್ರವೇಶಿಸಿದ ಬಳಿಕ ನೆಲಬಾಂಬ್‌ಗಳನ್ನು ಸ್ಫೋಟಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಮೇಲ್ಛಾವಣಿ ಸೇರಿದಂತೆ ಪೊಲೀಸ್ ಠಾಣೆಯ ಒಂದು ಭಾಗ ಕುಸಿದುಹೋಗಿದ್ದು, ವೈರ್‌ಲೆಸ್ ಟವರ್ ಮತ್ತು ದೂರವಾಣಿ ಉಪಕರಣಕ್ಕೆ ತೀವ್ರ ಹಾನಿಯಾಗಿದೆ ಎಂದು ಅವರು ನುಡಿದಿದ್ದಾರೆ.
|