ಶಿಮೋಲಿ ಜಂಕ್ಷನ್ ಬಳಿಯ ಬೊರಿವಿಲಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಮಹಡಿಗಳ ಕಟ್ಟಡವು ಶುಕ್ರವಾರ ಕುಸಿದುಬಿದ್ದು, ತಾತ್ಕಾಲಿಕ ಡೇರೆಯಲ್ಲಿದ್ದ ಮೂವರು ಅಸುನೀಗಿದ್ದಾರೆ. 12ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಅನೇಕ ಮಂದಿ ಅವಶೇಷಗಳ ಅಡಿಯಲ್ಲಿ ಇನ್ನೂ ಸಿಕ್ಕಿಬಿದ್ದಿದ್ದಾರೆಂದು ನಂಬಲಾಗಿದೆ.
ಕಟ್ಟಡ ಕುಸಿದ ಸ್ಥಳಕ್ಕೆ ತಕ್ಷಣವೇ ಮೂರು ಅಗ್ನಿಶಾಮಕ ವಾಹನವನ್ನು ಕಳಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಭಗವತಿ ಆಸ್ಪತ್ರೆಗೆ ಸೇರಿಸಲಾಗಿದೆ. ಕಟ್ಟಡ ಕುಸಿತದ ನಿಖರ ವಿವರಗಳು ಇನ್ನೂ ಲಭ್ಯವಾಗಿಲ್ಲ.
ಆದರೆ ಹೊಸ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸತ್ತಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಟ್ಟಡದ ನೆಲಮಾಳಿಗೆಯು ನಿರ್ಮಾಣ ಕೆಲಸದಿಂದ ಹಾನಿಯಾಗಿತ್ತೆಂದು ಹೇಳಲಾಗಿದ್ದು, ಕಟ್ಟಡದ ಭಾಗ ಕುಸಿಯಲು ಅದೇ ಕಾರಣವೆಂದು ಹೇಳಲಾಗಿದೆ.
|