ಇಬ್ಬರು ನ್ಯಾಯಾಧೀಶರ ಪೀಠವು ನ್ಯಾಯಾಂಗ ಕ್ರಿಯಾಶೀಲತೆ ಮತ್ತು ವ್ಯಾಪ್ತಿಮೀರುವುದರ ವಿರುದ್ಧ ವ್ಯಕ್ತಪಡಿಸಿದ ಅಭಿಪ್ರಾಯದಿಂದ ಉದ್ಭವಿಸಿದ ಗೊಂದಲಕ್ಕೆ ತೆರೆಎಳೆಯುವ ಪ್ರಯತ್ನವಾಗಿ, ಭವಿಷ್ಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೇಗೆ ವಿಚಾರಣೆಗೆ ಎತ್ತಿಕೊಳ್ಳಬೇಕೆಂಬ ಬಗ್ಗೆ ಸೂಚನೆಗಳು ಮತ್ತು ಮಾರ್ಗದರ್ಶಕಗಳನ್ನು ಸುಪ್ರೀಂಕೋರ್ಟ್ ರೂಪಿಸಲಿದೆ.
ಎಂತಹ ಪಿಐಎಲ್‌ಗಳನ್ನು ವಿಚಾರಣೆಗೆ ಎತ್ತಿಕೊಳ್ಳಬಹುದೆಂದು ಕೆಲವು ಮಾರ್ಗದರ್ಶಕಗಳಿರುವುದು ಒಳ್ಳೆಯದು ಎಂದು ಮುಖ್ಯನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರಿದ್ದ ಪೀಠ ತಿಳಿಸಿದೆ. ದ್ವಿನ್ಯಾಯಾಧೀಶರ ಪೀಠ ವ್ಯಕ್ತಪಡಿಸಿದ ಅಭಿಪ್ರಾಯದ ಹಿನ್ನೆಲೆಯಲ್ಲಿ ಎಸ್.ಬಿ. ಸಿನ್ಹಾ ನೇತೃತ್ವದ ಪೀಠವು ಪಿಐಎಲ್‌ವೊಂದನ್ನು ಮುಖ್ಯನ್ಯಾಯಮೂರ್ತಿಯ ನೇತೃತ್ವದ ಪೀಠದ ಅವಗಾಹನೆಗೆ ಒಪ್ಪಿಸಿ ಆ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಿತ್ತು.
ಮುಖ್ಯನ್ಯಾಯಮೂರ್ತಿ ಬಾಲಕೃಷ್ಣನ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಎ.ಕೆ. ಮಾಥುರ್ ಮತ್ತು ಮಾರ್ಕಂಡೇಯ ಕಾಟ್ಜು ನ್ಯಾಯಾಂಗ ಕ್ರಿಯಾಶೀಲತೆಯ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯದ ಬಗ್ಗೆ ಮಧ್ಯಪ್ರವೇಶಿಸಿ ದ್ವಿನ್ಯಾಯಾಧೀಶರ ಪೀಠದ ಆದೇಶಕ್ಕೆ ನಾವು ಬದ್ಧರಾಗಿರುವುದಿಲ್ಲವೆಂದು ಉತ್ತರಪ್ರದೇಶದ ವೃಂದಾವನ ಮತ್ತು ಮಥುರಾದ ವಿಧವೆಯರ ಸ್ಥಿತಿಗತಿ ಬಗ್ಗೆ ಸಲ್ಲಿಸಿದ ಪಿಐಎಲ್ ವಿಚಾರಣೆಗೆ ಸ್ವೀಕರಿಸುವ ಸಂದರ್ಭದಲ್ಲಿ ಹೇಳಿದರು.
ಮಾಥುರ್ ಮತ್ತು ಕಾಟ್ಜು ಅವರನ್ನು ಒಳಗೊಂಡ ಪೀಠವು ವ್ಯಕ್ತಪಡಿಸಿದ ಅಭಿಪ್ರಾಯದಿಂದ ಕೋರ್ಟ್‌ಗಳು ಭಿನ್ನ ನಿಲುವನ್ನು ಅಳವಡಿಸಿರುವುದರಿಂದ ಮುಖ್ಯನ್ಯಾಯಮೂರ್ತಿಯ ಪ್ರತಿಕ್ರಿಯೆ ಮಹತ್ವ ಪಡೆದಿದೆ.
|