ಒರಿಸ್ಸಾದ ಗಂಜಾಂ ಜಿಲ್ಲೆಯಲ್ಲಿ ಹೆಣ್ಣು ಕಾಡಾನೆಯೊಂದು ವಿದ್ಯುದಾಘಾತದಿಂದ ಅಸುನೀಗಿರುವ ಘಟನೆ ಶುಕ್ರವಾರ ಸಂಭವಿಸಿದೆ. ಸುಮಾರು 9 ಕಾಡಾನೆಗಳ ಗುಂಪು ಬಾಲಕೃಷ್ಣಾಪುರ ಗ್ರಾಮದ ಬಳಿ ಬತ್ತದ ಗದ್ದೆಯ ಬಳಿ ಸೇರಿದ್ದಾಗ ಹೆಣ್ಣು ಕಾಡಾನೆಯೊಂದು ತನ್ನ ಸೊಂಡಿಲಿನಿಂದ ವಿದ್ಯುತ್ ಕಂಬವೊಂದನ್ನು ಉರುಳಿಸಿತು. ವಿದ್ಯುತ್ ಕಂಬದ ತಂತಿಯಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ ಸ್ಪರ್ಶದಿಂದ ಹೆಣ್ಣಾನೆ ಸ್ಥಳದಲ್ಲೇ ಸತ್ತಿತೆಂದು ಹೇಳಲಾಗಿದೆ.
ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿಕಿ ನೀಡಿದ ಕೂಡಲೇ ಪಶುವೈದ್ಯರ ಜತೆ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಬತ್ತದ ಗದ್ದೆಯಲ್ಲಿ ಹೂಳಲಾಯಿತು. ಹೆಣ್ಣಾನೆ ವಿದ್ಯುದಾಘಾತದಿಂದ ಸತ್ತ ಬಳಿಕ ಉಳಿದ 8 ಕಾಡಾನೆಗಳು ಕೆರಾಂಡಿಮಲ ಬೆಟ್ಟಕ್ಕೆ ಚದುರಿಹೋದವೆಂದು ತಿಳಿದುಬಂದಿದೆ.
ಹೆಣ್ಣಾನೆಯನ್ನು ಹೂಳುವುದನ್ನು ಆನೆಗಳು ಬೆಟ್ಟದ ಮೇಲಿನಿಂದ ವೀಕ್ಷಿಸಿದ ಬಳಿಕ ಅಸ್ವಾಭಾವಿಕವಾಗಿ ವರ್ತಿಸುತ್ತಿವೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
|