ಟಿವಿ ಚಾನೆಲ್‌ಗಳು ಕೈಗೊಳ್ಳುವ ಕುಟುಕು ಕಾರ್ಯಾಚರಣೆಗೆ ಪೂರ್ವ ನಿರ್ಬಂಧ ವಿಧಿಸಲು ಮೂವರು ಸದಸ್ಯರ ಸಮಿತಿಯನ್ನು ರಚಿಸುವಂತೆ ದೆಹಲಿ ಹೈಕೋರ್ಟ್ ಸರ್ಕಾರಕ್ಕೆ ನೀಡಿದ ಆದೇಶದಿಂದ ತನಗೆ ಆಘಾತ ಮತ್ತು ಆಶ್ಚರ್ಯ ಉಂಟಾಗಿದೆ ಎಂದು ಸಂಪಾದಕರ ಗಿಲ್ಡ್ ಶನಿವಾರ ತಿಳಿಸಿದೆ.
ಇದನ್ನು ಅನುಷ್ಠಾನಕ್ಕೆ ತಂದರೆ ಕೋರ್ಟ್‌ನ ಈ ಸಲಹೆಯು ನ್ಯಾಯಾಂಗ ಬೆಂಬಲಿತ ತುರ್ತುಪರಿಸ್ಥಿತಿಯನ್ನು ಹಿಂಬಾಗಿಲ ಮೂಲಕ ಪರಿಚಯಿಸಿದಂತಾಗುತ್ತದೆ ಮತ್ತು ಸಂವಿಧಾನದಲ್ಲಿ ಖಾತ್ರಿ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿಕೆಯಲ್ಲಿ ಅದು ತಿಳಿಸಿದೆ.
ಕುಟುಕು ಕಾರ್ಯಾಚರಣೆಗಳಿಗೆ ಕಠಿಣವಾದ ಪ್ರಸಾರ ಪೂರ್ವ ಸ್ವಯಂ ನಿಯಂತ್ರಣ ವ್ಯವಸ್ಥೆ ಇರುವುದಕ್ಕೆ ನಮ್ಮ ಸಂಪೂರ್ಣ ಒಪ್ಪಿಗೆಯಿದೆ. ಆದರೆ ಕೋರ್ಟ್ ಸೂಚಿಸಿರುವ ಪರಿಹಾರ ಮಾತ್ರ ಮಾರಕವಾಗಿದೆ ಎಂದು ಸಂಪಾದಕರ ಗಿಲ್ಡ್ ಆಪಾದಿಸಿದೆ. ನಮ್ಮ ಪ್ರಜಾತಂತ್ರದ ಪೌರರು ಅನುಭವಿಸುತ್ತಿರುವ ಪತ್ರಿಕಾ ಸ್ವಾತಂತ್ರ್ಯಕ್ಕೆ ಇದು ಸಾವಿನ ಗಂಟೆ ಬಾರಿಸುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ಎಸ್. ಸಚ್ಚಿದಾನಂದ ಮೂರ್ತಿ ಹೇಳಿದ್ದಾರೆ.
ಸಮಿತಿಯಲ್ಲಿ ನಿವೃತ್ತ ನ್ಯಾಯಾಧೀಶರು, ಇಬ್ಬರು ಸರ್ಕಾರಿ ನೌಕರರು ಮತ್ತು ಪೊಲೀಸ್ ಅಧಿಕಾರಿಯಿಂದ ಕೂಡಿದ್ದು, ವಿಡಿಯೋ ಟೇಪ್‌ಗಳನ್ನು ವೀಕ್ಷಿಸಿ ಅದನ್ನು ಪ್ರಸಾರ ಮಾಡಲು ಯೋಗ್ಯವೇ ಎಂದು ನಿರ್ಧರಿಸುವಂತೆ ಕೋರ್ಟ್ ಸಲಹೆ ಮಾಡಿತ್ತು.
|