ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯ ದಾಂತೆವಾಡ ಜೈಲಿನಿಂದ ಭಾನುವಾರ ಸಂಜೆ 110 ಮಂದಿ ನಕ್ಸಲರು ಸೇರಿದಂತೆ 299 ಮಂದಿ ಕೈದಿಗಳು ಪರಾರಿಯಾಗಿದ್ದಾರೆ. ದಾಂತೆವಾಡ ಜಿಲ್ಲಾ ಕಾರಾಗೃಹದಲ್ಲಿ 377 ಕೈದಿಗಳಿದ್ದು ಇವರಲ್ಲಿ ಹೆಚ್ಚಿನವರು ನಕ್ಸಲರು ಮತ್ತು ಉಳಿದ ಹೆಚ್ಚಿನ ಕೈದಿಗಳು ಅವರ ಮೇಲೆ ಅನುಕಂಪ ಉಳ್ಳವರಾಗಿದ್ದರು.
ಜೈಲುಗಾರ್ಡುಗಳ ಮೇಲೆ ಹಲ್ಲೆ ನಡೆಸಿದ ಕೈದಿಗಳು ಏಕಾಏಕಿ ಪರಾರಿಯಾಗಿದ್ದಾರೆ. ಜೈಲ್‌ಬ್ರೇಕ್‌ಗಿಂತ ಮೊದಲು ನಡೆದ ಘರ್ಷಣೆಯಲ್ಲಿ ಕಾರಾಗೃಹದಲ್ಲಿದ್ದ ಐವರು ಗಾರ್ಡ್‌ಗಳಲ್ಲಿ ಮೂವರು ಗಾಯಗೊಂಡಿದ್ದಾರೆ. ಇತರ ಇಬ್ಬರು ಕೈದಿಗಳೂ ಘಟನೆಯ ವೇಳೆ ಗಾಯಗೊಂಡಿದ್ದಾರೆ.
ಸಾಯಂಕಾಲದ ಹೊತ್ತಿಗೆ ಕೈದಿಗಳಿಗೆ ಆಹಾರ ನೀಡುತ್ತಿದ್ದ ವೇಳೆ ಸುಜಿತ್ ಕುಮಾರ್ ಎಂಬ ನಕ್ಸಲ್, ಗಾರ್ಡ್ ಒಬ್ಬನ ಮೇಲೆ ಆಕ್ರಮಣ ಮಾಡಿ ಆತನ ಕೈಯಲ್ಲಿದ್ದ ಆಯುಧವನ್ನು ಕಿತ್ತುಕೊಂಡ. ಬಳಿಕ ಕುಮಾರ್ ಇತರ ಮೂವರು ಗಾರ್ಡ್‌ಗಳ ಮೇಲೆ ಗುಂಡುಹಾರಿಸಿ ಗಾಯಗೊಳಿಸಿದ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ನಕ್ಸಲರು ಪರಾರಿಯಾಗುವ ಮುನ್ನ ಗಾರ್ಡ್‌ಗಳ ಕೈಯಿಂದ ಆರು ರೈಫಲ್‌ಗಳು ಮತ್ತು ಒಂದು ವೈರ್‌ಲೆಸ್ ಸೆಟ್ ಕಸಿದುಕೊಂಡಿದ್ದಾರೆ.
ಇದು 'ಪೂರ್ವಯೋಜಿತ ಸಂಚು' ಎಂಬುದಾಗಿ ದಾಂತೆವಾಡ ಎಸ್ಪಿ ರಾಹುಲ್ ಶರ್ಮಾ ಹೇಳಿದ್ದಾರೆ. ತಪ್ಪಿಸಿಕೊಂಡಿರುವ ಕೈದಿಗಳಿಗಾಗಿ ಪೊಲೀಸರು ಮತ್ತು ಜೈಲು ಅಧಿಕಾರಿಗಳು ಪತ್ತೆ ಕಾರ್ಯ ಆರಂಭಿಸಿದ್ದಾರೆ.
|