ಹಣದ ಆಸೆ ಮತ್ತು ಅಹಂಗೆ ಉಂಟಾದ ಗಾಯ ಪ್ರವೀಣ್ ಮಹಾಜನ್ ತನ್ನ ಹಿರಿಯ ಸೋದರ ಪ್ರಮೋದ್ ಮಹಾಜನ್ ಅವರನ್ನು ಕೊಲ್ಲಲು ಎರಡು ಕಾರಣಗಳೆಂದು ಪೊಲೀಸರು ಕಳೆದ ವಾರ ಕೋರ್ಟ್‌ಗೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ. 650 ಪುಟಗಳ ಆರೋಪಪಟ್ಟಿಯಲ್ಲಿ ಪ್ರವೀಣ್ ಮತ್ತು 58 ಸಾಕ್ಷಿಗಳ ಹೇಳಿಕೆಗಳ ಜತೆಗೆ ಪ್ರಮೋದ್ ಪತ್ನಿ ರೇಖಾ ಮತ್ತು ಪ್ರವೀಣ್ ಗುಂಡು ಹಾರಿಸಿದ್ದನ್ನು ಪ್ರತ್ಯಕ್ಷವಾಗಿ ಕಂಡ ಪ್ರಮೋದ್ ನಿವಾಸದ ಸೇವಕನ ಹೇಳಿಕೆಗಳು ಕೂಡ ಸೇರಿವೆ.
ಪ್ರವೀಣ್ ಹೇಗೆ ಹತ್ಯೆಯನ್ನು ಯೋಜಿಸಿ ಪೂರ್ವನಿರ್ಧರಿತ ಮನಸ್ಸಿನಿಂದಲೇ ಅದನ್ನು ಜಾರಿಗೆ ತಂದರೆಂಬುದನ್ನು ಆರೋಪಪಟ್ಟಿಯಲ್ಲಿ ಬಹಿರಂಗಪಡಿಸಲಾಗಿದೆ. ಹತ್ಯೆ ನಡೆದ ಬಳಿಕ ಬಂಧಿತರಾದ ಪ್ರವೀಣ್ ಪೊಲೀಸರ ಎದುರು ತಮಗೆ ಪ್ರಮೋದ್ ಜತೆ ಕಳೆದ 20 ವರ್ಷಗಳಿಂದ ಭಿನ್ನಾಭಿಪ್ರಾಯವಿತ್ತೆಂದು ಬಹಿರಂಗಪಡಿಸಿದ್ದಾರೆ. ಪ್ರಮೋದ್ ಆರ್ಥಿಕ ಸಹಾಯ ಮಾಡುತ್ತಿದ್ದರೂ ಪ್ರವೀಣ್‌ಗೆ ಅದರ ಬಗ್ಗೆ ತೃಪ್ತಿಯಿರಲಿಲ್ಲ.
ಪ್ರಮೋದ್ ಬಹಿರಂಗವಾಗಿ ಅವರ ಜತೆ ಮಾತನಾಡದಿರುವುದು ಹಾಗೂ ಅವರ ಸಂಪರ್ಕವೂ ಸಿಗದಿರುವುದು ಪ್ರವೀಣ್‌ಗೆ ಅಸಮಾಧಾನ ಮೂಡಿಸಿತ್ತು. ಕಾರ್ಯದರ್ಶಿ ಮೂಲಕವೇ ಅವರನ್ನು ಸಂಪರ್ಕಿಸಬೇಕಾದ ಬಗ್ಗೆ ಪ್ರವೀಣ್‌ಗೆ ಸಹಿಸಲಾಗುತ್ತಿರಲಿಲ್ಲ. ತಮ್ಮ ಸೋದರ ಅವಮಾನ ಮಾಡುತ್ತಿದ್ದಾನೆಂದು ಪ್ರವೀಣ್ ಭಾವಿಸಿದ್ದರು. ಏಪ್ರಿಲ್ 22ರಂದು ನೀಡಿದ ಹೇಳಿಕೆ ಪ್ರಕಾರ ಕೌಟುಂಬಿಕ ವಿಷಯಗಳು ಇತ್ಯರ್ಥವಾಗದಿದ್ದರೆ ತಮ್ಮ ಸೋದರನ ಹತ್ಯೆಗೆ ಪ್ರಮೋದ್ ಯೋಜಿಸಿದರು.
ಪ್ರಮೋದ್‌ರನ್ನು ಹತ್ಯೆ ಮಾಡುವ ಉದ್ದೇಶದಿಂದ ತಮ್ಮ ನಿವಾಸದಿಂದ ಬೆಳಿಗ್ಗೆ 5.20ಕ್ಕೆ ಅವರು ಕಾರಿನಲ್ಲಿ ಹೊರಟರು. ಠಾಣೆಯಿಂದ ವೊರ್ಲಿಗೆ ತಲುಪಲು ಅವರಿಗೆ 2 ಗಂಟೆಗಳು ಬೇಕಾಯಿತು. ಅವರ ಸೋದರನ ನಿವಾಸ ತಲುಪಿದ ಕೂಡಲೇ ಪ್ರವೀಣ್ ಕೌಟುಂಬಿಕ ವಿಷಯದ ಬಗ್ಗೆ ಮಾತುತೆಗೆದರೂ ಪ್ರಮೋದ್ ಸುದ್ದಿಪತ್ರಿಕೆ ಓದುವುದರಲ್ಲೇ ಮಗ್ನರಾದ ಬಳಿಕ ಟಿವಿಯಲ್ಲಿ ಕ್ರೀಡಾ ಚಾನೆಲ್ ಹಾಕಿಕೊಂಡು ವೀಕ್ಷಿಸುವ ಮೂಲಕ ಕಡೆಗಣಿಸಿದರು.
ಪ್ರಮೋದ್ ತಮ್ಮ ಮಾತನ್ನು ಆಸಕ್ತಿಯಿಂದ ಆಲಿಸಿದ್ದರೆ ಪಿಸ್ತೂಲನ್ನು ತಮ್ಮ ಸೋದರನ ಪಾದದ ಬಳಿ ಇಡಲು ಯೋಜಿಸಿದ್ದ ಪ್ರವೀಣ್ ಆ ರೀತಿ ಆಗದಿದ್ದ ಹಿನ್ನೆಲೆಯಲ್ಲಿ ಪ್ರಮೋದ್ ಮೇಲೆ ಮೂರು ಗುಂಡುಗಳನ್ನು ಹಾರಿಸಿದರು. ಪ್ರವೀಣ್‌ರನ್ನು ಬಂಧಿಸಿದ ಬಳಿಕ ಪೊಲೀಸರ ಎದುರು ಮೇಲಿನ ಎಲ್ಲ ವಿಷಯಗಳನ್ನು ಅವರು ಬಹಿರಂಗಗೊಳಿಸಿದ್ದರು.
ಹತ್ಯೆಗೆ ಯೋಜಿಸುವ ಮುನ್ನ ಸಹಕಾರಿ ಬ್ಯಾಂಕಿನ ತಮ್ಮ ವೈಯಕ್ತಿಕ ಖಾತೆಯಿಂದ 4 ಲಕ್ಷ ರೂ.ಗಳನ್ನು ತೆಗೆದು ಅದನ್ನು ತಮ್ಮ ಪತ್ನಿ ಸಾರಂಗಿ ಹೆಸರಿಗೆ ವರ್ಗಾಯಿಸಿದ್ದಾಗಿ ಕೂಡ ಪ್ರವೀಣ್ ತಿಳಿಸಿದ್ದರು. ಪ್ರಮೋದ್‌ಗೆ ಗುಂಡುಹಾರಿಸಿದ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಪ್ರವೀಣ್ ಶರಣಾಗಿದ್ದರು.
|