ಪರಿಶಿಷ್ಟ ವರ್ಗದ ಸ್ಥಾನಮಾನ ನೀಡಬೇಕೆಂಬ ಗುಜ್ಜಾರ್ ಸಮುದಾಯದ ಬೇಡಿಕೆ ಕುರಿತು ಉನ್ನತಾಧಿಕಾರದ ನ್ಯಾಯಮೂರ್ತಿ ಜಸ್ರಾಜ್ ಛೋಪ್ರಾ ಸಮಿತಿಯು ಸೋಮವಾರ ತನ್ನ ನಿರ್ಣಾಯಕ ವರದಿಯನ್ನು ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾರಾಜೆ ಅವರಿಗೆ ಸಲ್ಲಿಸಿದೆ. ಮುಖ್ಯಮಂತ್ರಿಗೆ 294 ಪುಟಗಳ ವರದಿಯನ್ನು ಸಲ್ಲಿಸಲಾಯಿತು ಎಂದು ರಾಜ್ಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ವಸುಂಧರರಾಜೆ ಸಂಪುಟವು ವರದಿಯ ಬಗ್ಗೆ ಮುಂದಿನ ಕ್ರಮವನ್ನು ನಾಳೆ ಕೈಗೆತ್ತಿಕೊಳ್ಳಲಿದೆ. ಗುಜ್ಜಾರ್‌ಗಳಿಗೆ ಪರಿಶಿಷ್ಟ ವರ್ಗದ ಸ್ಥಾನಮಾನ ನೀಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವುದನ್ನು ವಿರೋಧಿಸಿ ಮೂವರು ಮೀನಾ ನಾಯಕರು ರಾಜೀನಾಮೆ ನೀಡಿದ ನೇಪಥ್ಯದಲ್ಲಿ ಈ ವರದಿಯನ್ನು ನೀಡಲಾಗಿದೆ.ರಾಜಸ್ತಾನದ ಬುಡಕಟ್ಟು ವರ್ಗದಲ್ಲಿ ಪ್ರಬಲ ಶಕ್ತಿಯಾದ ಮೀನಾ ಸಮುದಾಯವು ಗುರ್ಜಾರ್ ಬೇಡಿಕೆಯನ್ನು ವಿರೋಧಿಸುತ್ತಿದ್ದು, ತಮ್ಮ ಸೌಲಭ್ಯಗಳಿಗೆ ಕುಂದುಂಟಾಗುತ್ತದೆಂದು ಅವರು ನಂಬಿದ್ದಾರೆ.
ಇತರೆ ಹಿಂದುಳಿದ ವರ್ಗಗಳಿಗೆ ಪ್ರಸಕ್ತ ಸೇರಿರುವ ಗುಜ್ಜಾರ್ ಜನಾಂಗವು ಉತ್ತಮ ಉದ್ಯೋಗಾವಕಾಶ ಮತ್ತು ಶಿಕ್ಷಣಾವಕಾಶಗಳು ಸಿಗುವ ಪರಿಶಿಷ್ಟ ವರ್ಗದ ಶ್ರೇಣಿಯಲ್ಲಿ ಸೇರಿಸಬೇಕೆಂದು ಒತ್ತಾಯಿಸಿ ಮೇ 29ರಿಂದ ಜೂನ್ 4ರವರೆಗೆ ಪ್ರತಿಭಟನೆ ನಡೆಸಿತ್ತು. ಗುಜ್ಜಾರ್ ಸಮುದಾಯದ ಜನರು ನಡೆಸಿದ ಹಿಂಸಾಚಾರಕ್ಕೆ ಸುಮಾರು 21 ಜನರು ಪ್ರಾಣಕಳೆದುಕೊಂಡಿದ್ದರು ಮತ್ತು ಜನಜೀವನ ಅಸ್ತವ್ಯಸ್ತವಾಗಿತ್ತು.
|