ನಂದಿಗ್ರಾಮದಲ್ಲಿ ಮಾ.14ರಂದು ಸಂಭವಿಸಿದ ಪೊಲೀಸ್ ಗೋಲೀಬಾರ್‌ಗೆ ಸಂಬಂಧಿಸಿದಂತೆ ಸಿಬಿಐ ಸೋಮವಾರ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಲಿದ್ದು, ತನಿಖೆಗೆ ಇನ್ನೂ ಹೆಚ್ಚಿನ ಕಾಲಾವಕಾಶ ಕೋರಲಿದೆಯೆಂದು ಸಿಬಿಐನ ವಿಶೇಷ ನಿರ್ದೇಶಕ ಮಖಾನ್ ಲಾಲ್ ಶರ್ಮಾ ಹೇಳಿದ್ದಾರೆ. ನಮ್ಮ ತನಿಖೆ ಇನ್ನೂ ಮುಗಿದಿಲ್ಲ. ಕೋರ್ಟ್ ನಿರ್ದೇಶನದಂತೆ ಕೊಲ್ಕತಾ ಹೈಕೋರ್ಟ್‌ಗೆ ನಾವು ಮಧ್ಯಂತರ ವರದಿಯನ್ನು ಸಲ್ಲಿಸುತ್ತೇವೆ.
ನಮ್ಮ ತನಿಖೆಯನ್ನು ಮುಗಿಸಲು ಇನ್ನೂ 2 ತಿಂಗಳ ಕಾಲಾವಕಾಶ ನೀಡುವಂತೆ ನಾವು ಕೋರ್ಟ್‌ಗೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಅವರು ನುಡಿದರು. ಕಳೆದ ನವೆಂಬರ್ 16ರಂದು ಕೋಲ್ಕತಾ ಹೈಕೋರ್ಟ್ ನಂದಿಗ್ರಾಮದ ಹಿಂಸಾಚಾರದ ಘಟನೆಯನ್ನು ಅಸಂವಿಧಾನಿಕ ಮತ್ತು ಅಸಮರ್ಥನೀಯ ಎಂದು ಖಂಡಿಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸಿಬಿಐಗೆ ತಿಳಿಸಿತ್ತು.
ತನಿಖಾ ದಳವು ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಮತ್ತು 100ಕ್ಕೂ ಹೆಚ್ಚು ಪ್ರತ್ಯಕ್ಷದರ್ಶಿಗಳ ತನಿಖೆಯನ್ನು ಕೈಗೊಂಡಿತ್ತು ಎಂದು ಸಿಬಿಐ ಮೂಲಗಳು ಹೇಳಿವೆ. ಪೊಲೀಸ್ ಅಧಿಕಾರಿಗಳ ನಡುವಿನ ದೂರವಾಣಿ ಸಂಭಾಷಣೆಗಳ ವಿವರಗಳನ್ನು ಸಿಬಿಐ ಪಡೆದಿದ್ದು, ಯಾವುದೇ ತೀರ್ಮಾನಕ್ಕೆ ಬರುವ ಮುಂಚೆ ಆ ಬಗ್ಗೆ ಗಮನಹರಿಸುವುದಾಗಿ ಶರ್ಮಾ ಹೇಳಿದರು.
|