ಕಂಪ್ಯೂಟರ್ ಗ್ರಾಫಿಕ್ಸ್ ವಿನ್ಯಾಸಗಾರ ಶಿಕ್ಷಕ ರಿಜ್ವಾನುರ್ ರೆಹ್ಮಾನ್ ಅವರ ನಿಗೂಢ ಹತ್ಯೆಗೆ ಸಂಬಂಧಪಟ್ಟಂತೆ ಜನವರಿ 8ರಂದು ತನಿಖಾ ವರದಿ ಸಲ್ಲಿಸುವಂತೆ ಕೊಲ್ಕತಾ ಹೈಕೋರ್ಟ್ ಸೋಮವಾರ ಸಿಬಿಐಗೆ ಆದೇಶ ನೀಡಿದೆ. ಸಿಬಿಐ ವಕೀಲ ರಂಜನ್ ರಾಯ್ ಅವರ ಕೋರಿಕೆಯನ್ನು ಮನ್ನಿಸಿದ ನ್ಯಾಯಮೂರ್ತಿ ಸೌಮಿತ್ರ ಪಾಲ್ ಸಿಬಿಐಗೆ ವರದಿ ಸಲ್ಲಿಸಲು ಜನವರಿ 8ರವರೆಗೆ ಕಾಲಾವಕಾಶ ನೀಡಿದೆ.
ತನಿಖೆಯನ್ನು ಪೂರ್ಣಗೊಳಿಸಿ 2 ತಿಂಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ಪಾಲ್ ಅವರು ಸಿಬಿಐಗೆ ಅ.16ರಂದು ಆದೇಶ ನೀಡಿದ್ದರು. ಆದರೆ ಸಿಬಿಐ ಕೆಲವು ವಿಧಿವಿಧಾನಗಳನ್ನು ಪೂರೈಸಬೇಕಿರುವುದರಿಂದ 2 ತಿಂಗಳಲ್ಲಿ ವರದಿ ನೀಡಲು ಸಾಧ್ಯವಾಗಿರಲಿಲ್ಲ.
ರಿಜ್ವಾನುರ್ ಅವರು ಆ.18ರಂದು ವಿಶೇಷ ವಿವಾಹ ಕಾಯ್ದೆಯಡಿ ಪ್ರಿಯಾಂಕ ಅವರನ್ನು ವಿವಾಹವಾಗಿದ್ದರು. ಪ್ರಿಯಾಂಕ ಅವರನ್ನು ವಿವಾಹವಾಗಿ ಒಂದು ತಿಂಗಳಾದ ಬಳಿಕ ಸೆ.21ರಂದು ಬಿಧಾನಗರ ರಸ್ತೆ ಮತ್ತು ಡಮ್ ಡಮ್ ಜಂಕ್ಷನ್ ಬಳಿ ರೈಲ್ವೆ ಹಳಿಗಳ ಮೇಲೆ ರಿಜ್ವಾನುರ್ ದೇಹ ಪತ್ತೆಯಾಗಿತ್ತು.
|