ಖ್ಯಾತ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಹಂತಕ, ನ್ಯಾಯಾಲಯವು ದೋಷಿ ಎಂದು ಘೋಷಿಸಿರುವ, ಪ್ರವೀಣ್ ಮಹಾಜನ್‌ಗೆ ನ್ಯಾಯಾಲಯ ಇಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಲಿದ್ದು, ಜೀವಾವಧಿ ಅಥಾವ ಮರಣ ದಂಡನೆ ವಿಧಿಸುವ ಸಾಧ್ಯತೆಗಳಿವೆ.
ದಿವಂಗತ ಪ್ರಮೋದ್ ಮಹಾಜನ್‌ರಿಗಿಂತ ಏಳು ವರ್ಷ ಕಿರಿಯವರಾದ 48ರ ಹರೆಯದ ಪ್ರವೀಣ್, 20 ತಿಂಗಳ ಹಿಂದೆ ತನ್ನ ಸಹೋದರನ ಮನೆಗೆ ನುಗ್ಗಿ, ಅವರನ್ನು ಗುಂಡು ಹಾರಿಸಿ ಕೊಂದು, ಬಳಿಕ ಪೊಲೀಸರಲ್ಲಿ ಶರಣಾಗಿದ್ದರು.
ವಾಜಪೇಯಿ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದ ಪ್ರಮೋದ್ ಅವರನ್ನು 2006ರ ಎಪ್ರಿಲ್ 22ರಂದು ಕೊಲೆ ಮಾಡಲು ಪ್ರವೀಣ್ ಯತ್ನಿಸಿದ್ದರು. ಆದರೆ ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಪ್ರಮೋದ್ 12 ದಿನಗಳ ಸಾವುಬದುಕಿನ ಹೋರಾಟದ ಬಳಿಕ ಇಹಲೋಕ ತ್ಯಜಿಸಿದ್ದರು.
ಪ್ರವೀಣ್ ಮಹಾಜನ್ ತನ್ನ ಸಹೋದರನ ಕೊಲೆ ಹಾಗೂ ಕೊಲೆ ಉದ್ದೇಶದಿಂದ ಮನೆಗೆ ಅತಿಕ್ರಮಣ ಪ್ರವೇಶ ಮಾಡಿದ್ದಾರೆಂದು ನ್ಯಾಯಾಲಯ ತೀರ್ಮಾನಿಸಿದೆ.
ಗುಂಡು ಹಾರಾಟ ಘಟನೆಯ ಪ್ರತ್ಯಕ್ಷ ಸಾಕ್ಷಿಗಳಾದ ಪ್ರಮೋದ್ ಪತ್ನಿ ಹಾಗೂ ಅವರ ಮನೆಯ ಕೆಲಸದಾಳು ಮಹೇಶ್ ವಾಂಖೆಡೆ ಅವರ ಹೇಳಿಕೆಗಳು ಮತ್ತು ಪ್ರಮೋದ್ ಪತ್ನಿಯ ಸಹೋದರ ಗೋಪಿನಾಥ್ ಮುಂದೆ ಅವರ ಬಳಿ "ಪ್ರವೀಣ್ ನನ್ನ ಮೇಲೆ ಗುಂಡು ಹಾರಿಸಲು ನಾನು ಮಾಡಿದ್ದ ತಪ್ಪೇನು" ಎಂಬುದಾಗಿ ಪ್ರಮೋದ್ ಅವರು ಆಸ್ಪತ್ರೆಗೆ ತೆರಳುವ ಹಾದಿಯಲ್ಲಿ ನೀಡಿದ್ದ ಕೊನೆಯ, ಮರಣ ಶಯ್ಯೆಯ ಹೇಳಿಕೆಯನ್ನು ಪ್ರಮುಖ ಆಧಾರವಾಗಿಸಿಕೊಂಡಿರುವ ನ್ಯಾಯಲಯ ಪ್ರವೀಣ್‌ರನ್ನು ದೋಷಿ ಎಂದು ತೀರ್ಮಾನಿಸಿದೆ.
ಹೆಚ್ಚುವರಿ ಸತ್ರ ನ್ಯಾಯಾಧೀಶ ಎಸ್.ಪಿ.ದಾವರೆ ಅವರು ಈ ತೀರ್ಪು ನೀಡಿದ್ದಾರೆ. ಪ್ರವೀಣ್‌ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಯನ್ನು ವಿಧಿಸಬಹುದಾಗಿದೆ ಎಂದು ಕಾನೂನು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
|