ಜೈಲಿನ ಆಸ್ಪತ್ರೆಯಲ್ಲಿ ತಮ್ಮ ಸಹಚರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದರ ಪ್ರತಿಭಟನಾರ್ಥವಾಗಿ ಬೇವೂರ್ ಕೇಂದ್ರೀಯ ಕಾರಾಗೃಹದಲ್ಲಿದ್ದ ನಕ್ಸಲರು ಇತರ ಕೈದಿಗಳೂ ಉಪವಾಸ ಸತ್ಯಾಗ್ರಹ ಕೈಗೊಳ್ಳುವಂತೆ ಬಲವಂತ ನಡೆಸಿದಾಗ ಜೈಲಿನಲ್ಲಿ ಸಂಘರ್ಷ ನಡೆಯಿತು.
ಉಪವಾಸ ಮುಷ್ಕರಕ್ಕೆ ಬೆಂಬಲಿಸುವಂತೆ ನಕ್ಸಲರು ಇತರ ಕೈದಿಗಳನ್ನು ಒತ್ತಾಯಿಸಿದಾಗ ಅಲ್ಲಿ ಸಂಘರ್ಷ ಏರ್ಪಟ್ಟಿತು ಎಂದು ಕಾರಾಗೃಹ ಇಲಾಖೆಯ ಐಜಿ ಸಂದೀಪ್ ಪೌಂಡ್ರಿಕ್ ತಿಳಿಸಿದ್ದಾರೆ.
ನಕ್ಸಲರು ಜೈಲಿನ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿ, ಅತ್ಯುನ್ನತ ಭದ್ರತೆಯ ಜೈಲನ್ನು ಸಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ ಎಂಬ ವರದಿಗಳನ್ನು ಅವರು ಅಲ್ಲಗಳೆದರು.
"ನಕ್ಸಲರು ಮತ್ತು ಇತರ ಕೈದಿಗಳ ಮಧ್ಯೆ ಸಂಘರ್ಷ ಏರ್ಪಟ್ಟಿತು. ಅಷ್ಟೇ ಹೊರತು ಬೇರೇನೂ ನಡೆದಿಲ್ಲ. ಪ್ರತಿಭಟನಾಕಾರರು ಸರಕಾರ ಮತ್ತು ಜೈಲು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಿದ್ದರು" ಎಂದು ಐಜಿ ಸ್ಪಷ್ಟಪಡಿಸಿದರು.
ಜೈಲು ಅಧಿಕಾರಿಗಳು ನಕ್ಸಲರನ್ನು ಮನವೊಲಿಸುವ ಯತ್ನ ನಡೆಸಿದರು. ಅವರಲ್ಲಿ ಕೆಲವರು ಎರಡು ದಿನಗಳಿಂದ ಉಪವಾಸದಲ್ಲಿ ತೊಡಗಿದ್ದಾರೆ ಎಂದು ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿ.ರಾಜಿಂದರ್ ತಿಳಿಸಿದ್ದಾರೆ. ಡಿಸೆಂಬರ್ 14ರಂದು ನಗೀನಾ ಮಾಂಜಿ ಎಂಬ ನಕ್ಸಲ್ ಒಬ್ಬ ಜೈಲಿನ ಆಸ್ಪತ್ರೆಯಲ್ಲಿ ನೇಣಿಗೆ ಶರಣಾಗಿದ್ದ.
|