ಜಾಗತಿಕ ತಾಪಮಾನದ ವಿರುದ್ಧ ಹೋರಾಟಕ್ಕೆ ಹೊಸ ಒಪ್ಪಂದಕ್ಕಾಗಿ ಮಾತುಕತೆ ನಡೆಸಲು ಇಂಡೋನೇಶಿಯದ ಬಾಲಿಯಲ್ಲಿ ಕಳೆದ ವಾರ ಒಪ್ಪಿಗೆಯಾದ್ದನ್ನು ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಕುರಿತ ಅಂತರ ಸರ್ಕಾರಿ ಸಮಿತಿಯ ಅಧ್ಯಕ್ಷ ರಾಜೇಂದ್ರ ಪಚೌರಿ ಸ್ವಾಗತಿಸಿದ್ದಾರೆ. ಹಸಿರುಮನೆ ಅನಿಲಗಳ ಹೊರಹೊಮ್ಮುವಿಕೆಯ ಪ್ರಮಾಣವನ್ನು ಕುಂಠಿತಗೊಳಿಸುವುದು ಈಗ ಅತೀ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಒಂದು ಗುಂಪಿನ ರಾಷ್ಟ್ರಗಳಿಗೆ ಎಲ್ಲ ಅನಿಲಗಳನ್ನು ವಾತಾವರಣಕ್ಕೆ ಬಿಡಲು ಅವಕಾಶ ನೀಡಿ, ಆ ಸಮಸ್ಯೆಗೆ ಜವಾಬ್ದಾರಿಯಾಗದ ಇನ್ನೊಂದು ಗುಂಪಿನ ರಾಷ್ಟ್ರಗಳು ತೊಂದರೆ ಅನುಭವಿಸಲು ಅವಕಾಶ ನೀಡುವುದು ಸರಿಯಲ್ಲ ಎಂದು ಅವರು ನುಡಿದರು. ಬಾಲಿಯಲ್ಲಿ ಏನು ನಿರ್ಧರಿಸಲಾಯಿತೋ ಅದನ್ನು ತುರ್ತು ಪ್ರಜ್ಞೆ ಮತ್ತು ನ್ಯಾಯಯುತವಾಗಿ ಅನುಷ್ಠಾನಕ್ಕೆ ತರಬೇಕಾಗಿದೆ ಎಂದು ಪಚೌರಿ ಏಷ್ಯ ನ್ಯೂಸ್ ಇಂಟರ್‌ನ್ಯಾಷನಲ್‌ಗೆ ತಿಳಿಸಿದರು.
ಭಾರತ ಕೂಡ ಸ್ವಚ್ಛ ಪರಿಸರ ಖಾತರಿಯ ತನ್ನ ಕರ್ತವ್ಯಗಳನ್ನು ಪೂರೈಸಬೇಕು ಎಂದು ಪಚೌರಿ ಹೇಳಿದರು. ಭಾರತಕ್ಕೆ ಕೂಡ ಹಸಿರುಮನೆ ಅನಿಲಗಳ ಪರಿಣಾಮ ತಡೆಯಲು ಹಲವಾರು ಅವಕಾಶಗಳಿವೆ. ಆರ್ಥಿಕತೆಯ ಎಲ್ಲ ಕ್ಷೇತ್ರದಲ್ಲಿ ಇಂಧನ ಬಳಕೆಯ ದಕ್ಷತೆ ಸುಧಾರಣೆಗೆ ನಮಗೆ ಕೆಲವು ಆಯ್ಕೆಗಳಿರುತ್ತದೆ. ಆ ಮೂಲಕ ಕೆಲವು ರಚನಾತ್ಮಕ ಬದಲಾವಣೆ ನಾವು ಮಾಡಬಹುದು ಎಂದು ಅವರು ನುಡಿದರು.
ಉದಾಹರಣೆಗೆ ಸಾರಿಗೆ ಕ್ಷೇತ್ರದಲ್ಲಿ ಖಾಸಗಿ ವಾಹನದ ಸಾರಿಗೆಗಿಂತ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಲು ಮಹತ್ವ ನೀಡಬೇಕು ಎಂದು ಅವರು ಹೇಳಿದರು. ಅದು ಸ್ಥಳೀಯ ಕಾರಣಗಳಿಗಾಗಿ ಒಳ್ಳೆಯದು. ಅದರಿಂದ ನಾವೂ ಕೂಡ ಹಸಿರುಮನೆ ಅನಿಲಗಳ ಬೆಳವಣಿಗೆಯನ್ನು ಇಳಿಮುಖ ಮಾಡಬಹುದು ಎಂದು ಅವರು ಹೇಳಿದರು.
|