ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ವಾಮರಂಗ ಕಠಿಣ ನಿಲುವನ್ನು ತೆಗೆದುಕೊಳ್ಳುವುದೆಂಬ ವರದಿಗಳ ನಡುವೆ ಕೇಂದ್ರದಲ್ಲಿ ಪರ್ಯಾಯ ಒಕ್ಕೂಟದ ರಚನೆಯೊಂದರಲ್ಲಿ ಎಡಪಕ್ಷಗಳು ಆಸಕ್ತಿ ತಾಳಿರುವುದು ಕುತೂಹಲ ಕೆರಳಿಸಿದೆ. ಸಿಪಿಎಂ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್ ನವದೆಹಲಿಯಲ್ಲಿ ತೆಲುಗುದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಅವರನ್ನು ಮಂಗಳವಾರ ಭೇಟಿ ಮಾಡಿ ಸುಮಾರು ಒಂದು ಗಂಟೆ ಕಾಲ ವಿಚಾರವಿನಿಮಯ ನಡೆಸಿದರು.
ರಾಜಕೀಯ ಗೊತ್ತುವಳಿಯನ್ನು ಅಂತಿಮಗೊಳಿಸುವ ಕೇಂದ್ರ ಸಮಿತಿ ಸಭೆಗೆ ಮೂರು ದಿನಗಳ ಮುನ್ನ ಸಿಪಿಎಂ ಮುಖ್ಯಕಚೇರಿಯಲ್ಲಿ ಈ ಸಭೆ ನಡೆಯಿತು. ರಾಜಕೀಯ ಗೊತ್ತುವಳಿಗೆ ಅಂತಿಮ ಸ್ವರೂಪ ನೀಡುವ ಮುನ್ನ, ಕೇಂದ್ರದಲ್ಲಿ ಪರ್ಯಾಯ ಒಕ್ಕೂಟವೊಂದರ ರಚನೆಗೆ ಸಂಭವನೀಯ ಪಾಲುದಾರರನ್ನು ಸೇರಿಸಲು ಪಕ್ಷವು ವಿಶಾಲ ಮನೋಭಾವ ಹೊಂದಿದೆಯೆಂದು ಪಕ್ಷದ ಮೂಲಗಳು ಹೇಳಿವೆ.
ಎನ್‌ಸಿಪಿ ನಾಯಕ ಡಿ.ಪಿ. ತ್ರಿಪಾಠಿ ಕೂಡ ಕಾರಟ್ ಅವರನ್ನು ಸಂಜೆ ಭೇಟಿ ಮಾಡಿದ್ದರೂ, ಅವರಿಬ್ಬರ ನಡುವೆ ನಡೆದ ಮಾತುಕತೆಯ ವಿವರಗಳು ಲಭ್ಯವಾಗಿಲ್ಲ., ಇತ್ತೀಚೆಗೆ ರೈತರ ಸಮಸ್ಯೆಗಳ ಬಗ್ಗೆ ಪ್ರದರ್ಶನದಲ್ಲಿ ತ್ರಿಪಾಠಿ ಕಮ್ಯೂನಿಸ್ಟ್ ಮುಖಂಡರ ಜತೆ ವೇದಿಕೆಯನ್ನು ಹಂಚಿಕೊಂಡಿದ್ದರು. ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ರಾಜಧಾನಿಯಲ್ಲಿ ಉಳಿದಿರುವ ಕಾರಟ್ ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಅವರನ್ನು ಕೂಡ ಭೇಟಿ ಮಾಡುವರೆಂದು ನಿರೀಕ್ಷಿಸಲಾಗಿದೆ.
|