ಹನ್ನೊಂದನೇ ಪಂಚವಾರ್ಷಿಕ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡಿರುವ ಕುರಿತು ಬಿಜೆಪಿ ಆಡಳಿತದ ರಾಜ್ಯಗಳಿಂದ ತೀವ್ರ ಆಕ್ಷೇಪಗಳು ಕೇಳಿಬಂದಿದ್ದು, ಇದು ಧರ್ಮ ಮತ್ತು ಜಾತಿಯ ಆಧಾರದಲ್ಲಿ ಸಮಾಜವನ್ನು ಒಡೆಯುವ ತಂತ್ರವಾಗಿದೆ ಎಂದು ತೀವ್ರವಾಗಿ ಆಕ್ಷೇಪಿಸಿದವು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮನಮೋಹನ್ ಸಿಂಗ್, ಸಮಾಜದಲ್ಲಿ ಮೂಲೆಗುಂಪಾದವರ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಾಗಿದ್ದು, ಆರ್ಥಿಕ ಬೆಳವಣಿಗೆ ಪ್ರಕ್ರಿಯೆಯಲ್ಲಿ ಸಕ್ರಿಯ ಭಾಗೀದಾರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಸಮರ್ಥಿಸಿಕೊಂಡರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತೀವ್ರವಾಗಿ ಆಕ್ಷೇಪಿಸಿದ್ದು, ಇದು ಸಮಾಜವನ್ನು ಒಡೆಯುವ ಕೇಂದ್ರದ ನೀತಿಯ ಪ್ರತೀಕ ಎಂದು ಆರೋಪಿಸಿದರು.
11ನೇ ಪಂಚವಾರ್ಷಿಕ ಯೋಜನೆ (2007-12) ಪರಿಗಣನೆಗಾಗಿ ದೇಶದ ಅತ್ಯುನ್ನತ ನೀತಿ ನಿರೂಪಣಾ ಘಟಕವಾದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ಸಭೆ ಬುಧವಾರ ನಡೆದಿತ್ತು. ಈ ಸಭೆಯು ಪ್ರಧಾನಿ ಮತ್ತು ಮೋದಿ ಪರಸ್ಪರ ವಾಗ್ದಾಳಿಯ ಅಖಾಡವಾಯಿತು.
ಅಲ್ಪಸಂಖ್ಯಾತರ ಓಲೈಕೆಗಾಗಿ ಪ್ರಧಾನಿ ಈ 15 ಅಂಶಗಳ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದರ ಮರುವಿಮರ್ಶೆ ನಡೆಯಬೇಕು ಎಂದು ಮೋದಿ ಆಗ್ರಹಿಸಿದಾಗ ಪ್ರಧಾನಿ ಸಿಂಗ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಮೋದಿ ವಾದವನ್ನು ಬೆಂಬಲಿಸಿದರು.
ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಕೇಂದ್ರ ಸಚಿವರು, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಆಯೋಗದ ಸದಸ್ಯರು ಭಾಗವಹಿಸಿದ್ದರು. 36 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಗೆ ಅವಕಾಶವಿರುವ 11ನೇ ಯ ಯೋಜನೆಯ ಕರಡು ಪ್ರತಿಗೆ ಕೇಂದ್ರ ಸಂಪುಟ ಕಳೆದ ತಿಂಗಳು ಅನುಮೋದನೆ ನೀಡಿತ್ತು.
|