36 ವರ್ಷ ವಯಸ್ಸಿನ ಫಿನ್ನಿಷ್ ಮಹಿಳೆಯನ್ನು ನವಿಮುಂಬೈನ ಉಪನಗರದಲ್ಲಿ ಅಜ್ಞಾತ ವ್ಯಕ್ತಿಗಳು ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಫಿನ್ನಿಷ್ ಮೆಷಿನ್ ಟೂಲ್ ಕಂಪನಿಯಲ್ಲಿ ಕೆಲಸ ಮಾಡುವ ಈ ಮಹಿಳೆಯು ವೃತ್ತಿಸಂಬಂಧ ಭಾರತಕ್ಕೆ ಭೇಟಿ ನೀಡಿದ್ದರು. ಮಂಗಳವಾರ ಮುಂಜಾನೆ ಪೆಟ್ರೋಲ್ ಪಂಪ್ ಹೊರಗೆ ಕುಳಿತಿದ್ದ ಮಹಿಳೆಗೆ ತರಚಿದ ಗಾಯಗಳಾಗಿರುವುದನ್ನು ಪೊಲೀಸ್ ಗಸ್ತು ಪಡೆ ಗಮನಿಸಿತು.
ಆಕೆ ನಮ್ಮಿಂದ ವೈದ್ಯಕೀಯ ಸಹಾಯ ನಿರಾಕರಿಸಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಅಲ್ಲಿನ ವೈದ್ಯರಿಗೆ ವಿಷಯ ಮುಟ್ಟಿಸಿದ ಬಳಿಕ ಅತ್ಯಾಚಾರದ ದೂರನ್ನು ದಾಖಲಿಸಲಾಯಿತು ಎಂದು ನವಿ ಮುಂಬೈ ಪೊಲೀಸ್ ಆಯುಕ್ತ ರಾಮರಾವ್ ವಾಘ್ ತಿಳಿಸಿದರು.
ತಾನು ಬೇಲಾಪುರದ ಹೊಟೆಲ್‌ನಲ್ಲಿ ಸೋಮವಾರ ರಾತ್ರಿ ಭೋಜನ ಮತ್ತು ಮದ್ಯ ಸೇವಿಸಿದ್ದಾಗಿ ಮಹಿಳೆ ಹೇಳಿದ್ದಾರೆ. ಹೊಟೆಲ್‌ಗೆ ಒಂಟಿಯಾಗಿ ತೆರಳಿದ ಅವರು ಸಮೀಪದ ಮನೆಗೆ ತೆರಳಲು ರಿಕ್ಷಾ ಸಿಗದೇ ಖಾಸಗಿ ವಾಹನದಲ್ಲಿ ಹೊರಟಿದ್ದಾಗ ಚಾಲಕ ಸಮೀಪದ ಪಾರ್ಸಿಕ್ ಹಿಲ್‌ಗೆ ಮಹಿಳೆಯನ್ನು ಎಳೆದುಕೊಂಡು ಹೋಗಿ ಆಕೆಯ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಮಾಡಿದನೆಂದು ವಾಘ್ ತಿಳಿಸಿದ್ದಾರೆ.
ಮಹಿಳೆಯ ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದ್ದು, ಪ್ರತ್ಯಕ್ಷದರ್ಶಿಗಳಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ. ಎರಡು ತಿಂಗಳ ಕೆಳಗೆ ಸಿಬಿಡಿ ಬೇಲಾಪುರದಲ್ಲಿ ಪಾನಮತ್ತರಾಗಿ ಮತ್ತು ಒಂಟಿಯಾಗಿ ರಾತ್ರಿ ಬಹುಹೊತ್ತಿನಲ್ಲಿ ಇದೇ ಮಹಿಳೆ ತಿರುಗಾಡುತ್ತಿದ್ದರೆಂದು ಪೊಲೀಸರು ಹೇಳಿದ್ದಾರೆ.
|