ಭಾರತದಲ್ಲೇ ಇರಬೇಕೆಂದು ಬಯಸಿದಲ್ಲಿ ಬಿಗಿಭದ್ರತೆಯಲ್ಲಿ ದೆಹಲಿಯಲ್ಲೇ ಇರಬೇಕು, ಕೊಲ್ಕತ್ತಾಗೆ ತೆರಳುವಂತಿಲ್ಲ ಎಂದು ಕೇಂದ್ರ ಸರ್ಕಾರ ಬಾಂಗ್ಲಾದೇಶದ ವಿವಾದಾಸ್ಪದ ಲೇಖಕಿ ತಸ್ಲೀಮಾ ನಸ್ರೀನ್‌ಗೆ ಕಟ್ಟಕಡೆಯ ಎಚ್ಚರಿಕೆ ನೀಡಿದೆ.
ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಆಡಳಿತದ ನಡುವೆ ಸರಣಿ ಸಭೆಗಳ ನಂತರ ಈ ನಿರ್ಧಾರವನ್ನು ಕೇಂದ್ರ ಕೈಗೊಂಡಿದೆ. ಏತನ್ಮಧ್ಯೆ, ಕೊಲ್ಕತ ತನ್ನ ಎರಡನೆ ಮನೆಯಾಗಿರುವ ಕಾರಣ ತಾನು ಭಾರತ ತ್ಯಜಿಸುವ ಮಾತೇ ಇಲ್ಲಎಂದು ತಸ್ಲಿಮಾ ಹೇಳಿದ್ದರು.
ಆಕೆಯ ಮೇಲೆ ಬೆದರಿಕೆಗಳು ಇರುವ ಕಾರಣ ಆಕೆ ಕೋಲ್ಕತಗೆ ಮರಳುವುದು ಸುರಕ್ಷವಲ್ಲ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಆಕೆಯ ಸುರಕ್ಷೆಯ ಕುರಿತು ಭರವಸೆ ನೀಡಲಾರೆ ಎಂದು ಹೇಳಿದೆ ಎನ್ನಲಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟು ನಿಟ್ಟಿನ ನಿರ್ಧಾರಕ್ಕೆ ಬಂದಿದೆ.
ಇದೀಗ ಸರ್ಕಾರದ ಈ ಕೊನೆಯ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ತಸ್ಲಿಮಾ, "ಕೊಲ್ಕತಗೆ ತೆರಳುವ ಅವಕಾಶ ಇಲ್ಲವೆಂದಾದರೆ ತಾನು ಭಾರತದಿಂದ ತೆರಳಲು ಇಚ್ಛಿಸುವುದಾದರೂ, ಇದು ಅಗಾಧ ನೋವು ನೀಡುವ ವಿಚಾರ ಎಂದು ಹೇಳಿದ್ದಾರೆ. ನಾನು ಭಾರತದಲ್ಲಿ ಜೀವಿಸುವುದಾದರೆ, ನಾನು ಮನೆಯಿಂದ ಹೊರತೆರಳುವಂತಿಲ್ಲ, ಸ್ನೇಹಿತರನ್ನು ಭೇಟಿಯಾಗುವಂತಿಲ್ಲ, ಗೃಹಬಂಧನದಲ್ಲಿ ಇರಬೇಕು" ಎಂದು ಹೇಳಿದ್ದಾರೆ.
ಸರ್ಕಾರಿ ಕೊನೆಯ ಆದೇಶವನ್ನು ಸರ್ಕಾರಿ ಅಧಿಕಾರಿಯೊಬ್ಬರು ಅವರು ತಲುಪಿಸಿದ್ದಾರೆ. ಸಾರ್ವಜನಿಕರ ಕಣ್ಣಿಗೆ ಬೀಳದಂತೆ ಬದುಕಬೇಕು ಎಂದು ಕೇಂದ್ರ ಸರ್ಕಾರ ಇದೀಗ ತಸ್ಲಿಮಾಗೆ ತಾಕೀತು ಮಾಡಿದೆ. ಇವರು ಸುಮಾರು 14 ವರ್ಷಗಳ ಕಾಲ ಯುರೋಪಿನಲ್ಲಿ ಜೀವಿಸಿದ್ದರು.
ಕೋಲ್ಕತದಲ್ಲಿ ಜೀವಿಸುತ್ತಿದ್ದ ತಸ್ಲಿಮಾರನ್ನು, ಮುಸ್ಲಿಂ ಸಂಘಟನೆಯೊಂದರ ಮುಷ್ಕರದ ಹಿನ್ನೆಲೆಯಲ್ಲಿ ಅಲ್ಲಿಂದ ಹೊರಡುವಂತೆ ಹೇಳಲಾಗಿತ್ತು. ತರಾತುರಿಯಲ್ಲಿ ಕೊಲ್ಕತ ಬಿಟ್ಟ ಬಳಿಕ ಜೈಪುರದಲ್ಲಿ ಒಂದು ರಾತ್ರಿ ತಂಗಿದ್ದ ಅವರು, ದೆಹಲಿಯ ರಾಜಸ್ತಾನ ಭವನದಲ್ಲಿ ಕೆಲವು ದಿನಗಳು ಇದ್ದರು. ಅಲ್ಲಿಂದ ಅವರನ್ನು ಕೇಂದ್ರ ಸರ್ಕಾರವು ಭಾರೀ ಭದ್ರತೆಯೊಂದಿಗೆ ಅಜ್ಞಾತ ಸ್ಥಳದಲ್ಲಿ ಇರಿಸಿದೆ.
|