ಪೊಲೀಸ್ ವ್ಯವಸ್ಥೆ ನವೀಕರಣಕ್ಕೆ ಮಾರ್ಗಗಳನ್ನು ರಾಜಸ್ತಾನ ಪೊಲೀಸರು ಹುಡುಕುತ್ತಿದ್ದು, ಪೊಲೀಸ್ ಠಾಣೆಗಳಲ್ಲಿ ಸಮುದಾಯ ವೀಕ್ಷಕರ ನೇಮಕದ ಬಳಿಕ,ಉತ್ತಮ ನಡವಳಿಕೆ ಕುರಿತು ಕೈಪಿಡಿಯೊಂದನ್ನು ರಚಿಸಿದ್ದಾರೆ. ಸ್ನೇಹಿತರನ್ನು ಗೆಲ್ಲುವುದು ಮತ್ತು ಜನರ ಮೇಲೆ ಪ್ರಭಾವ ಬೀರುವುದು ಹೇಗೆ ಎಂದು ಮಾಹಿತಿ ನೀಡುವ ಮಾರ್ಗದರ್ಶಿಕೆಯನ್ನು ಪ್ರತಿಯೊಬ್ಬ ಪೊಲೀಸರೂ ಓದಬೇಕಾಗಿದೆ.
ಮಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆಯು ಪ್ರಾಯೋಜಿಸಿದ ಕಾರ್ಯಾಗಾರದ ಫಲವೇ ಈ ಕೈಪಿಡಿಯಾಗಿದೆ. ರಾಜಸ್ತಾನದಲ್ಲಿ ಪೊಲೀಸರ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಗುರಿಯನ್ನು ಮತ್ತು ಪೊಲೀಸರು ಒರಟರು ಮತ್ತು ಕೋಪಿಷ್ಠರು ಎಂಬ ಜನರ ಮನೋಭಾವವನ್ನು ಬದಲಾಯಿಸುವ ಆಶಯವನ್ನು ಕೈಪಿಡಿ ಹೊಂದಿದೆ.
ಕೈಪಿಡಿಯು ಪೊಲೀಸರಿಗೆ ಸಹನೆಯ ಪಾಠವನ್ನು ಹೇಳುತ್ತದೆ. ಕೆಲಸದ ಒತ್ತಡಗಳ ನಡುವೆಯೂ ಕೋಪ, ಒತ್ತಡದ ನಿಯಂತ್ರಣವನ್ನು ಕಲಿಸುತ್ತದೆ. ಸಾರ್ವಜನಿಕರನ್ನು ನಗುಮುಖದೊಂದಿಗೆ ಭೇಟಿಮಾಡಿ ಎಂದೂ ಬುದ್ಧಿಮಾತು ಹೇಳುತ್ತದೆ.
ಪೊಲೀಸರ ಕಾರ್ಯನಿರ್ವಹಣೆ ಸುಧಾರಿಸುವುದು ಇದರ ಗುರಿಯಾಗಿದೆ. ಉದಾಹರಣೆಗೆ ಮಹಿಳೆಯರು, ಮಕ್ಕಳು ಮತ್ತು ಹಿರಿಯ ಪೌರರ ಭೇಟಿಗೆ ಹೋದಾಗ ಪೊಲೀಸರ ವರ್ತನೆಯಲ್ಲಿ ಸುಧಾರಣೆ ತರುವುದು ಇದರ ಉದ್ದೇಶವಾಗಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ ನಿನಾ ಸಿಂಗ್ ಹೇಳಿದರು.
ಇದಕ್ಕೆ ಮುಂಚೆ ಪೊಲೀಸರು ಒತ್ತಡ ತಂತ್ರಗಳನ್ನು ಬಳಸಿ ತಮಗೆ ಬೇಕಾದ ಕೆಲಸ ಮಾಡಿಕೊಳ್ಳುತ್ತಿದ್ದರು. ಆದರೆ ಬಲಪ್ರಯೋಗವನ್ನು ಸದಾ ಬಳಸುವ ಅವಶ್ಯಕತೆಯಿಲ್ಲ ಎಂದು ನಾವು ಮನಗಂಡಿದ್ದೇವೆ. ಸಕಾರಾತ್ಮಕ ರೀತಿಯಲ್ಲಿ ನಮ್ಮ ಕೆಲಸವನ್ನು ಮಾಡಬಹುದು ಎಂದು ಪೇದೆ ಸುರ್ಜಾ ರಾಂ ಹೇಳುತ್ತಾರೆ.
|