ಭಾರತದಲ್ಲಿ ಆಶ್ರಯ ಕೋರುವ ವಿದೇಶಿ ಪೌರರನ್ನು ಕುರಿತ ನೀತಿಗಳು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರಿಗೂ ಅನ್ವಯಿಸುತ್ತದೆ ಎಂದು ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ತಿಳಿಸಿದ್ದಾರೆ. ನಸ್ರೀನ್ ವಾಸ್ತವ್ಯಕ್ಕೆ ಸಂಬಂಧಪಟ್ಟಂತೆ ಏನೇ ಸಮಸ್ಯೆಯಿದ್ದರೂ ಸಂಬಂಧಿಸಿದ ಅಧಿಕಾರಿಗಳನ್ನು ಅವರು ಸಂಪರ್ಕಿಸಬೇಕೆಂದು ಪ್ರಣವ್ ಶನಿವಾರ ತಿಳಿಸಿದ್ದಾರೆ.
ಭಾರತದಲ್ಲಿ ಆಶ್ರಯ ಪಡೆಯುವವರಿಗೆ ನಮ್ಮ ಸರ್ಕಾರದ ನೀತಿಯನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ. ನಸ್ರೀನ್‌ಗೆ ಏನಾದರೂ ತೊಂದರೆಗಳಿದ್ದರೆ, ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿಬೇಕೆಂದು ಅವರು ನುಡಿದರು.ನವದೆಹಲಿಯು ತನ್ನನ್ನು ಅಕ್ಷರಶಃ ಗೃಹಬಂಧನದಲ್ಲಿರಿಸಿದೆ ಎಂದು ನಸ್ರೀನ್ ಗುರುವಾರ ಆರೋಪಿಸಿ, ತಮಗೆ ಸ್ವಾತಂತ್ರ್ಯ ನೀಡುವಂತೆ ಕೋರಿದ್ದರು.
ನಸ್ರೀನ್ ಮಾಡಿರುವ ಗೃಹಬಂಧನದ ಆರೋಪವನ್ನು ಬಿಜೆಪಿ ಆಘಾತಕಾರಿ ಸುದ್ದಿ ಎಂದು ಬಣ್ಣಿಸಿದೆ. ಅತಿಥಿ ದೇವೋಭವ ಎಂಬ ಸಿದ್ಧಾಂತವನ್ನು ಯುಪಿಎ ಸರ್ಕಾರ ಮರೆಯಬಾರದೆಂದು ಎಚ್ಚರಿಸಿದೆ. "ತಸ್ಲಿಮಾ ಬಾಂಗ್ಲಾದೇಶದಲ್ಲಿ ಧಾರ್ಮಿಕ ಮತಾಂಧತೆಗೆ ಬಲಿಪಶುವಾಗಿದ್ದಾರೆ. ಈಗ ಅವರು ಭಾರತದ ಆಶ್ರಯ ಬೇಡಿ ಬಂದಿದ್ದಾರೆ.ಸರ್ಕಾರ ಇಚ್ಛೆಪಟ್ಟರೆ ಯಾರಿಗೂ ಜೀವಿಸುವ ಹಕ್ಕಿಲ್ಲ ಎಂದು ಆಗಿನ ಅಟಾರ್ನಿ ಜನರಲ್ ಅವರ ಕುಖ್ಯಾತಿಯ ನುಡಿಯನ್ನು ನೆನಪಿಸುತ್ತಾ ನಾವು 1975ರ ತುರ್ತುಪರಿಸ್ಥಿತಿ ಆಳ್ವಿಕೆಯ ಅಡಿಯಲ್ಲಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಲು ಬಯಸುತ್ತೇವೆ" ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡ್ಕರ್ ಮೇಲಿನಂತೆ ತಿಳಿಸಿದರು.
ತಸ್ಲೀಮಾ ಅವರ ವೀಸಾ 2008ರ ಫೆ.17ರವರೆಗೆ ಭಾರತದಲ್ಲಿ ಉಳಿದುಕೊಳ್ಳಲು ಮಾನ್ಯತೆ ಪಡೆದಿದ್ದು, ಅವರು ಕಳೆದ 10 ವರ್ಷಗಳಿಂದ ದೇಶಭ್ರಷ್ಟರಾಗಿ ಜೀವಿಸುತ್ತಿದ್ದಾರೆ.
|