ಮಹಾರಾಷ್ಟ್ರದ ಕಂದಾಯ ಸಚಿವ ನಾರಾಯಣ ರಾಣೆ ಅವರು ಸ್ವತಃ ಸರ್ಕಾರದ ವಿರುದ್ಧ ಕಿಡಿಕಾರಿದ್ದರಿಂದ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ರಾಣೆ ವಿರುದ್ಧ ವೈಮನಸ್ಸಿಗೆ ಕಾರಣವಾಗಿದೆ. ನಾರಾಯಣ ರಾಣೆ ನವದೆಹಲಿಯಲ್ಲಿ ಶುಕ್ರವಾರ ಹಠಾತ್ತಾಗಿ ವಿಲಾಸ್‌ರಾವ್ ದೇಶ್‌ಮುಖ್ ವಿರುದ್ಧ ವಾಗ್ಬಾಣ ಸುರಿಸಿದ್ದರು.
ಇದರಿಂದ ಸರ್ಕಾರದ ಸ್ಥಿರತೆ ಬಗ್ಗೆ ಊಹಾಪೋಹಗಳು ಉದ್ಭವಿಸಿದೆ. ರಾಣೆ ಅವರಿಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಪ್ರಭುರಾವ್ ಕುಮ್ಮಕ್ಕಿದೆಯೆಂದು ನಂಬಲಾಗಿದೆ. "ನನಗೆ ತೀವ್ರ ಅತೃಪ್ತಿಯಾಗಿದೆ, ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿಲ್ಲ. ನಾನು 2 ವರ್ಷಗಳ ತನಕ ಕಾದರೂ ಅದು ಸಾಧ್ಯವಾಗಿಲ್ಲ"ಎಂದು ನಾರಾಯಣ ರಾಣೆ ಅತೃಪ್ತಿ ವ್ಯಕ್ತಪಡಿಸಿದ್ದರು.
ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ವರಿಷ್ಠ ಮಂಡಳಿಯು ಮಹಾರಾಷ್ಟ್ರದಲ್ಲಿ ನಾಯಕತ್ವ ಬದಲಾವಣೆಗೆ ಪರಿಶೀಲನೆ ಮಾಡುವುದೆಂದು ಕಾಂಗ್ರೆಸಿಗರು ನಂಬಿದ್ದು, ರಾಣೆಯ ದಿಢೀರ್ ವಾಗ್ದಾಳಿ ಅವರನ್ನು ದಿಗ್ಮೂಢರನ್ನಾಗಿಸಿದೆ.
"ಪ್ರತಿಯೊಬ್ಬರಿಗೂ ವರಿಷ್ಠ ಮಂಡಳಿಯನ್ನು ಕಾಣುವ ಹಕ್ಕಿದೆ. ರಾಣೆ ಸಮಸ್ಯೆ ಏನೆಂಬುದು ತಮಗೆ ತಿಳಿದಿಲ್ಲ. ಆದಾಗ್ಯೂ, ನಾನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿದ್ದೇನೆ" ಎಂದು ದೇಶ್‌ಮುಖ್ ಅವರು ರಾಣೆ ಹೇಳಿಕೆಗೆಗೆ ಚಾಣಾಕ್ಷತನದ ಉತ್ತರ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತುಕತೆ ನಡೆದಿದ್ದರೂ, ರಾಣೆಯವರ ದಿಢೀರ್ ವಾಗ್ದಾಳಿಯಿಂದ ಅವರು ಮುಖ್ಯಮಂತ್ರಿ ಹುದ್ದೆಯ ಓಟದಲ್ಲಿ ಸೋತಿರುವುದನ್ನು ದೃಢಪಡಿಸುತ್ತದೆ. ಕಾಂಗ್ರೆಸ್ ವರಿಷ್ಠ ಮಂಡಳಿಯು ದೇಶ್‌ಮುಖ್ ಅವರನ್ನು ಪದಚ್ಯುತಿಗೊಳಿಸಿದರೂ, ಮುಖ್ಯಮಂತ್ರಿ ಹುದ್ದೆಗೆ ರಾಣೆ ಅವರನ್ನು ಆಯ್ಕೆ ಮಾಡುವುದಿಲ್ಲ ಎನ್ನುವುದನ್ನು ರಾಣೆ ಪ್ರತಿಕ್ರಿಯೆಯು ರುಜುವಾತು ಮಾಡಿದೆ.
|