ಅತ್ಯಂತ ಕುತೂಹಲ ಕೆರಳಿಸಿದ ಗುಜರಾತ್ ವಿಧಾನಸಭೆ ಚುನಾವಣೆಯ ಮತಎಣಿಕೆ ಭಾನುವಾರ ಆರಂಭವಾಗಲಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಬಹುಜನ ಸಮಾಜಪಕ್ಷದ ಅಭ್ಯರ್ಥಿಗಳ ಹಣೆಬರಹವನ್ನು ಈ ಚುನಾವಣೆ ಫಲಿತಾಂಶ ನಿರ್ಧರಿಸಲಿದೆ. ವಿಶೇಷವಾಗಿ ಬಿಜೆಪಿ ಪುನಃ ಗೆಲುವು ಸಾಧಿಸಿ ಮೋದಿ ಮುಖ್ಯಮಂತ್ರಿ ಗಾದಿಯನ್ನು ಉಳಿಸಿಕೊಳ್ಳುವರೇ ಎನ್ನುವ ಕುತೂಹಲ ಮೂಡಿಸಿದೆ.
ಡಿ.16ರಂದು ಅಂತಿಮ ಸುತ್ತಿನ ಮತದಾನ ನಡೆಯಿತು.ಈ ರಿಯ ಚುನಾವಣೆ ಪ್ರಚಾರವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ನರೇಂದ್ರ ಮೋದಿ ನಡುವೆ ವಾಕ್ಸಮರಕ್ಕೆ ನಾಂದಿಯಾಯಿತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಸಾವಿನ ವ್ಯಾಪಾರಿ ಎಂದು ಬಣ್ಣಿಸುವ ಮೂಲಕ ವಾಕ್ಸಮರಕ್ಕೆ ನಾಂದಿ ಹಾಡಿದರು.
ಸೊಹ್ರಾಬುದ್ದೀನ್ ಶೇಖ್ ಅವರ ಎನ್‌ಕೌಂಟರ್ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಮೋದಿ ಹಿಂದುತ್ವ ಪರ ನಿಲುವಿನಿಂದ ಮತದಾರರ ಓಲೈಕೆಗೆ ಯತ್ನಿಸಿದರು. ಮತಎಣಿಕೆಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. 25 ಜಿಲ್ಲಾ ಕೇಂದ್ರಗಳಲ್ಲಿ 37 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಾನೂನು ಸುವ್ಯವಸ್ಥೆ ಪಾಲನೆಗೆ ಬಿಗಿ ಭದ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
|