ಗುಜರಾತ್ ರಾಜ್ಯ ವಿಧಾನ ಸಭೆಯ ಚುನಾವಣಾ ಫಲಿತಾಂಶಗಳು ಹೊರಬಿಳುತ್ತಿದ್ದು, ಭಾರತೀಯ ಜನತಾ ಪಕ್ಷವು 120 ವಿಧಾನಸಭಾ ಮತಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ 59 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಅಂತಿಮ ವರದಿಗಳು ತಿಳಿಸಿವೆ.
ನರೇಂದ್ರ ಮೋದಿ ಅಧಿಕಾರದ ವಿರುದ್ಧ ಭಿನ್ನಮತ ವ್ಯಕ್ತಪಡಿಸಿದ್ದ ಪಟೇಲ್ ಸಮುದಾಯದ ಮುಖಂಡರು, ತಮ್ಮ ಬಾಹುಳ್ಯವಿರುವ ಸೌರಾಷ್ಟ್ರ ಪ್ರದೇಶ ಕೂಡ ನರೇಂದ್ರ ಮೋದಿಗೆ ಚುನಾವಣೆಯಲ್ಲಿ ಬೆಂಬಲ ನೀಡಿರುವುದರಿಂದ ಭಾರತೀಯ ಜನತಾ ಪಕ್ಷದ ಪಾಲಿಗೆ ಕಗ್ಗಂಟಾಗಿದ್ದ ಸೌರಾಷ್ಟ್ರದ ಭಿನ್ನಮತ ಸದ್ದಿಲ್ಲದೇ ಅಡಗಿದೆ. ಸೌರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ 38, ಕಾಂಗ್ರೆಸ್ 17 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಕಳೆದ ಬಾರಿಯ ಚುನಾವಣೆಯಲ್ಲಿ ಕೂಡ ಭಾರತೀಯ ಸೌರಾಷ್ಟ್ರದಲ್ಲಿ 38 ವಿಧಾನ ಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಕೇಂದ್ರ ಗುಜರಾತ್, ಭಾರತೀಯ ಜನತಾ ಪಕ್ಷ 23, ಕಾಂಗ್ರೆಸ್ 14, ಉತ್ತರ ಗುಜರಾತ್‌ನಲ್ಲಿ ಬಿಜೆಪಿ-32, ಕಾಂಗ್ರೆಸ್ 15, ದಕ್ಷಿಣ ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷ 17 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಮೋಡಿ ಮಾಡದ ಸಾವಿನ ವ್ಯಾಪಾರಿ
ಗುಜರಾತ್ ವಿಧಾನಸಭೆಯ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿಯವರನ್ನು ಮೌತ್ ಕಾ ಸೌದಾಗರ್ ಎಂದು ಜರೆದಿದ್ದ ಸೋನಿಯಾ ಗಾಂಧಿ ಮತ್ತು ರೋಡ್ ಶೋಗಳಲ್ಲಿ ಪಾಲ್ಗೊಂಡು ಜನರನ್ನು ತಮ್ಮತ್ತ ಸೆಳೆಯುವಲ್ಲಿ ರಾಹುಲ್ ಗಾಂಧಿ ಸಂಪೂರ್ಣ ವಿಫಲರಾಗಿರುವುದು ಫಲಿತಾಂಶದ ಮೂಲಕ ಸಾಬೀತಾಗಿದೆ. ಮೊದಲು ವೈಬ್ರೆಂಟ್ ಗುಜರಾತ್ ಎಂದು ಜಪಿಸಿದ ನರೇಂದ್ರ ಮೋದಿ ಅವರು ನಂತರ ಕಳೆದ ಬಾರಿಯ ಚುನಾವಣೆಯಲ್ಲಿ ಪ್ರತಿಪಾದಿಸಿದ ಸ್ವಾಭಿಮಾನಿ ಗುಜರಾತ್ ಮಾದರಿಯಲ್ಲಿ ಜನರನ್ನು ತಮ್ಮತ್ತ ಆಕರ್ಷಿಸುವಲ್ಲಿ ಈ ಬಾರಿ ಸಫಲರಾಗಿದ್ದಾರೆ.
|