ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರ ವಿರುದ್ಧ ಸಂಚು ರೂಪಿಸಿದ್ದ ಲಷ್ಕರ್ ಎ ತೈಯ್ಯಬಾದ ಇಬ್ಬರು ಉಗ್ರರು ಭಾನುವಾರ ಬೆಳಿಗ್ಗೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತರಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಬಾರಾಬಂಕಿ ಸಮೀಪ ಪೊಲೀಸ್ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಶಂಕಿತ ಲಷ್ಕರ್ ಸಂಘಟನೆಯ ಉಗ್ರರು ಮುಖ್ಯಮಂತ್ರಿ ಮಾಯಾವತಿ ಅವರ ಹತ್ಯೆ ಸಂಚನ್ನು ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತ ಉಗ್ರರ ಬಳಿ ಹತ್ತು ಹ್ಯಾಂಡ್ ಗ್ರೆನೇಡ್, ಎರಡು ಎಕೆ 47, ಆತ್ಮಹತ್ಯಾ ಬೆಲ್ಟ್, ಆರು ಮ್ಯಾಗ್‌ಜಿನ್ಸ್ ಮತ್ತು ಹಲವಾರು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಎಸ್‌ಟಿಎಫ್‌ನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಬಾದಾನ್ ತಿಳಿಸಿದ್ದಾರೆ.
ಈ ಇಬ್ಬರೂ ಉಗ್ರರು ಪಾಕಿಸ್ತಾನಿ ಪ್ರಜೆಗಳಾಗಿದ್ದರು. ಅಲ್ಲದೇ ಶನಿವಾರವಷ್ಟೇ ಉತ್ತರಪ್ರದೇಶ ಪೊಲೀಸರು ಹಾಗೂ ಕೇಂದ್ರ ರಕ್ಷಣಾ ಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಹರ್ಕತ್ ಉಲ್ ಜೆಹಾದಿ ಇಸ್ಲಾಮಿ(ಹುಜಿ) ಸಂಘಟನೆಯ ಇಬ್ಬರು ಉಗ್ರರನ್ನು ಬಾರಾಬಂಕಿ ರೈಲ್ವೇ ನಿಲ್ದಾಣದಲ್ಲಿ ಸೆರೆ ಹಿಡಿದಿದ್ದರು. ಇವರು ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದರು. ಬಂಧಿತ ಉಗ್ರರನ್ನು ಖಾಲಿದ್ ಮೊಹಮ್ಮದ್ ಹಾಗೂ ತಾರೀಖ್ ಎಂದು ಗುರುತಿಸಲಾಗಿದೆ. ಅವರಿಂದ 1.25ಕೆ.ಜಿ. ಆರ್‌ಡಿಎಕ್ಸ್, ಕೆಲವು ಜೆಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
|