ಗುಜರಾತ್ ವಿಧಾನಸಭೆಯ 182ಸೀಟುಗಳ ಪೈಕಿ ಭಾರತೀಯ ಜನತಾಪಕ್ಷ 117ಸೀಟುಗಳಲ್ಲಿ ಭರ್ಜರಿ ಜಯ ಸಾಧಿಸಿದ್ದು, ಕಾಂಗ್ರೆಸ್ 62 ಹಾಗೂ ಪಕ್ಷೇತರರು 3ಸೀಟುಗಳಲ್ಲಿ ಗೆಲುವು ಪಡೆದಿದ್ದಾರೆ.
ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಅಂತಿಮ 20ನೇ ಸುತ್ತಿನ ಮತ ಎಣಿಕೆಯಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ದಿನ್ಸಾ ಪಟೇಲ್ ಅವರಿಗಿಂತ 86ಸಾವಿರ ಮತಗಳ ಅಂತರದಿಂದ ಭರ್ಜರಿ ಜಯ ಪಡೆದಿದ್ದಾರೆ. ಮೋದಿ 1,38,668 ಮತ ಗಳಿಸಿದ್ದರೆ, ದಿನ್ಸಾ ಪಟೇಲ್ 52,339 ಮತ ಪಡೆದಿದ್ದರು.
ಭಾನುವಾರ ನಡೆದ ಮತಎಣಿಕೆಯಲ್ಲಿ ಆಡಳಿತರೂಢ ಬಿಜೆಪಿಯು 117ಸೀಟುಗಳಲ್ಲಿ ಸ್ಪಷ್ಟ ಬಹುಮತ ಗಳಿಸಿದ್ದು, ಕಾಂಗ್ರೆಸ್ ಕೇವಲ 62ಸೀಟುಗಳಲ್ಲಿ ಜಯ ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 127ಸೀಟುಗಳಲ್ಲಿ ಜಯಗಳಿಸಿದ್ದು, ಕಾಂಗ್ರೆಸ್ 51ಸೀಟುಗಳಲ್ಲಿ ಗೆಲುವು ಸಾಧಿಸಿತ್ತು. ಮತದಾರರಿಗೆ ಅಭಿನಂದನೆ: ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ಏರಿಸಿದ ಮತದಾರರಿಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿ, ಗುಜರಾತ್ ಜನತೆ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ತಿರಸ್ಕರಿಸುವ ಮೂಲಕ ತಮ್ಮ ಅಂತಿಮ ತೀರ್ಪನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಗುಜರಾತ್ ಮಹಾಜನತೆ ಚೆಕ್ ದೇ ಮಂತ್ರವನ್ನು ತಿರಸ್ಕರಿಸಿ, ಜೀತೆಗಾ ಗುಜರಾತ್ ಮಂತ್ರವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ಅದಕ್ಕೆ ತಾನು ಆಭಾರಿ ಎಂದು ಮೋದಿ ಹೇಳಿದ್ದಾರೆ.
|