ಮೋದಿ ಅವರ ಅಭೂತಪೂರ್ವ ಗೆಲುವಿನಿಂದಾಗಿ ಗುಜರಾತ್ ವಿಧಾನಸಭೆ ಮತ್ತೊಮ್ಮೆ ಭಾರತೀಯ ಜನತಾ ಪಕ್ಷದ ಪಾಲಾಗಿದ್ದು, ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ಬಿಜೆಪಿ ಶಾಸಕರುಗಳು ಸೋಮವಾರ ಮಹತ್ವದ ಸಭೆ ಸೇರಿ, ಮೋದಿ ಅವರನ್ನು ತಮ್ಮ ಶಾಸಕಾಂಗ ಸಭೆಯ ನಾಯಕರನ್ನಾಗಿ ಆಯ್ಕೆ ಮಾಡಲಿದ್ದಾರೆ.
ಒಟ್ಟು 182 ವಿಧಾನಸಭಾ ಮತಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 117 ಸ್ಥಾನಗಳನ್ನು ಗಳಿಸುವುದರೊಂದಿಗೆ ಮತ್ತೊಮ್ಮೆ ಬಹುಮತ ಸಾಬೀತು ಮಾಡಿ, ಆಡಳಿತದ ಗದ್ದುಗೆಯನ್ನು ಏರಲು ತುದಿಗಾಲ ಮೇಲೆ ನಿಂತಿದ್ದು, ಸೋಮವಾರ ಬೆಳಿಗ್ಗೆ ನಡೆಯುವ ನೂತನ ಶಾಸಕರುಗಳ ಸಭೆ ಅನೌಪಚಾರಿಕವಾಗಿದೆ.
ಭಾನುವಾರ ಸಂಜೆ ಅಹಮದಾಬಾದಿನಲ್ಲಿ ಜರುಗಿದ ಉನ್ನತಮಟ್ಟದ ಬಿಜೆಪಿ ಸಭೆಯಲ್ಲಿ, ಮೋದಿ ಅವರೇ ಮತ್ತೊಂದು ಬಾರಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ಹೈಕಮಾಂಡ್ ಹಸಿರು ನಿಶಾನೆ ತೋರಿಸಿದ್ದು, ಗಾಂಧಿನಗರದಲ್ಲಿ ಇಂದು ನಡೆಯುವ ಶಾಸಕಾಂಗ ಸಭೆಯಲ್ಲಿ ಬಿಜೆಪಿ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಲಿದೆ ಎಂದು ಬಿಜೆಪಿ ವಕ್ತಾರ ಅರುಣ್ ಜೆಟ್ಲಿ ತಿಳಿಸಿದ್ದಾರೆ.
ಈ ಶಾಸಕಾಂಗ ಸಭೆಗೆ ಬಿಜೆಪಿ ಹೈಕಮಾಂಡ್, ರಾಷ್ಟ್ರೀಯ ಉಪಾಧ್ಯಕ್ಷ ವೆಂಕಯ್ಯ ನಾಯ್ಡು ಮತ್ತು ಹಿರಿಯ ನಾಯಕ ಅರುಣ್ ಜೆಟ್ಲಿ ಅವರನ್ನು ವೀಕ್ಷಕರನ್ನಾಗಿ ಕಳುಹಿಸಿಕೊಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
|