ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷ ಸೋಲನುಭವಿಸಿದ ಹಿನ್ನೆಲೆಯಲ್ಲಿ ಪರಮಾಣು ಒಪ್ಪಂದದ ಬಗ್ಗೆ ಎಡಪಕ್ಷಗಳಿಂದ ಹೊಸ ದಾಳಿಗೆ ಕಾಂಗ್ರೆಸ್ ಒಳಗಾಗಿದೆ. ಜಾತ್ಯತೀತತೆ ಧೋರಣೆ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಕಾಗುವುದಿಲ್ಲ ಎಂದು ಆಡಳಿತ ಪಕ್ಷಕ್ಕೆ ಸಿಪಿಐ ತಿಳಿಸಿದೆ. ಜಾತ್ಯತೀತತೆಯೊಂದೇ ಸಾಕಾಗುವುದಿಲ್ಲ ಎಂದು ಕಾಂಗ್ರೆಸ್ ಅರಿತುಕೊಳ್ಳಬೇಕಿದ್ದು, ತನ್ನ ನೀತಿಗಳ ಬಗ್ಗೆ ವಿಶೇಷವಾಗಿ ಆರ್ಥಿಕ ರಂಗದಲ್ಲಿನ ನೀತಿಗಳ ಬಗ್ಗೆ ಕಾಂಗ್ರೆಸ್ ಗಂಭೀರ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ಅದು ಪುನರಾಲೋಚನೆ ಮಾಡಿ ತನ್ನ ನೀತಿಗಳಲ್ಲಿ ಮಾರ್ಪಾಡು ಮಾಡಬೇಕೆಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜಾ ತಿಳಿಸಿದರು.
ತಿರುಪತಿಯಿಂದ ಮಾತನಾಡುತ್ತಿದ್ದ ಅವರು, ಗುಜರಾತ್‌ನಲ್ಲಿ ಜನತೆಯ ತೀರ್ಪಿನಿಂದ ಜಾತ್ಯತೀಯ ಶಕ್ತಿಗಳು ಸೂಕ್ತ ಪಾಠ ಕಲಿಯಬೇಕಾಗಿದೆ. ಕೋಮುವಾದಿ ನಿರಂಕುಶಾಧಿಕಾರದ ವಿರುದ್ಧ ಜಾತ್ಯತೀತ ಶಕ್ತಿಗಳು ಒಂದುಗೂಡಿ ಹೋರಾಟವನ್ನು ತೀವ್ರಗೊಳಿಸಬೇಕು ಎಂದು ಅವರು ನುಡಿದರು.
ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ ಸಿಪಿಎಂ ಪಾಲಿಟ್‌ಬ್ಯೂರೊ, ಹಿಂದುತ್ವದ ಕೋಮುವಾದಿ ಸಿದ್ಧಾಂತದ ವಿರುದ್ಧ ರಾಜಿಯಿಲ್ಲದ ಮತ್ತು ದೃಢಸಂಕಲ್ಪದ ಹೋರಾಟ ಮತ್ತು ಮೋದಿ ಸರ್ಕಾರದ ಬಲಪಂಥೀಯ ಆರ್ಥಿಕ ನೀತಿಗಳಿಂದ ತೊಂದರೆಗೊಳಗಾದ ಜನವರ್ಗದ ಸುಸ್ಥಿರ ಹೋರಾಟ ಅಗತ್ಯವಾಗಿದೆ ಎಂದು ಅವರು ನುಡಿದರು.
|