2009ರ ಚುನಾವಣೆಗೆ ಕೃಷಿಯನ್ನು ಮುಖ್ಯ ಚುನಾವಣೆ ವಿಷಯವನ್ನಾಗಿ ಮಾಡಲು ನಿರ್ಧರಿಸಿರುವ ಸಂಯುಕ್ತ ರಾಷ್ಟ್ರೀಯ ಪ್ರಗತಿಪರ ಒಕ್ಕೂಟ(ಯುಎನ್‌ಪಿಎ) ರಾಷ್ಟ್ರದ ಮೂರು ಮುಖ್ಯ ನಗರಗಳಲ್ಲಿ ರೈತರ ಸಮಾವೇಶಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದೆ.
ಜನವರಿ 21ರಂದು ಜೈಪುರದಲ್ಲಿ, ರಾಂಚಿಯಲ್ಲಿ ಫೆ.6ರಂದು ಮತ್ತು ಮುಂಬೈನಲ್ಲಿ ಫೆ.3ರಂದು ಈ ಸಭೆಗಳು ನಡೆಯಲಿವೆ ಎಂದು ತೆಲುಗುದೇಶಂ ಸಂಸದೀಯ ಪಕ್ಷದ ನಾಯಕ ಕೆ. ಯೆರ್ರಂ ನಾಯ್ಡು ಪಕ್ಷದ ಪಾಲಿಟ್‌ಬ್ಯೂರೊ ಸಭೆಯ ಬಳಿಕ ವರದಿಗಾರರಿಗೆ ತಿಳಿಸಿದರು. ವಿಜಯವಾಡದಲ್ಲಿ ಕಳೆದ ತಿಂಗಳು ರೈತರ ಸಮಸ್ಯೆಗಳ ಬಗ್ಗೆ ಗಮನಸೆಳೆಯಲು ಯುಎನ್‌ಪಿಎ ಪ್ರಾಯೋಜಿಸಿದ್ದ ರೈತರ ಬೃಹತ್ ರಾಲಿಯ ಬೆನ್ನ ಹಿಂದೆಯೇ ಈ ಸಮಾವೇಶಗಳು ನಡೆಯಲಿವೆ.
ತೆಲುಗುದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಅಧ್ಯಕ್ಷತೆ ವಹಿಸಿದ್ದ ಪಾಲಿಟ್‌ಬ್ಯೂರೊ ಸಭೆಯಲ್ಲಿ ರೈತರ ಸಮಸ್ಯೆಗಳನ್ನು ರಾಷ್ಟ್ರ ರಾಜಕಾರಣದ ಕೇಂದ್ರ ಸ್ಥಾನಕ್ಕೆ ತರುವಲ್ಲಿ ಯುಎನ್‌ಪಿಎ ಯಶಸ್ವಿಯಾಗಿದ್ದು, ಉಳಿದ ಪಕ್ಷಗಳು ಕೃಷಿ ಬಗ್ಗೆ ಮಾತುಕತೆಯನ್ನು ಬಲವಂತವಾಗಿ ನಡೆಸುವಂತಾಗಿದೆ ಎಂದು ಹೇಳಿದರು. ಪ್ರಾದೇಶಿಕ ಪಕ್ಷಗಳ ಒಕ್ಕೂಟ ಕೂಡ ನವದೆಹಲಿಯಲ್ಲಿ ಕೃಷಿಗೆ ಸಂಬಂಧಿಸಿದ ಮಾತುಕತೆಯನ್ನು ನಡೆಸಿದೆ.
|