ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಬಗ್ಗೆ ಸ್ವಲ್ಪ ಮಟ್ಟಿಗೆ ಮೃದು ಧೋರಣೆ ತಳೆದಿರುವ ಮಾರ್ಕ್ಸ್‌ವಾದಿ ಹಿರಿಯ ನಾಯಕ ಜ್ಯೋತಿ ಬಸು, ತಸ್ಲೀಮಾ ಇಷ್ಟಪಟ್ಟರೆ ಕೊಲ್ಕತಾಗೆ ವಾಪಸಾಗಬಹುದು. ಆದರೆ ಕೇಂದ್ರ ಸರ್ಕಾರ ಅವರಿಗೆ ರಕ್ಷಣೆ ಕೊಡುವ ಖಾತರಿ ನೀಡಬೇಕು ಎಂದು ತಿಳಿಸಿದ್ದಾರೆ. ತಮ್ಮ ಸಾಲ್ಟ್ ಲೇಕ್ ನಿವಾಸದಲ್ಲಿ ಅಭಿನಂದನಾ ಸಮಾರಂಭದ ಬಳಿಕ ಅವರು ವರದಿಗಾರರ ಜತೆ ಮಾತನಾಡುತ್ತಿದ್ದರು.
ತಸ್ಲೀಮಾ ಬರೆದ ಲೇಖನದ ಬಗ್ಗೆ ಕೋಲ್ಕತ್ತಾದಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಅವರು ನಗರಕ್ಕೆ ಹಿಂತಿರುಗುವುದಕ್ಕೆ ಎಡಪಕ್ಷದ ಅನೇಕ ನಾಯಕರು ನಿರಾಸಕ್ತಿ ಧೋರಣೆ ತಾಳಿರುವ ನಡುವೆ ಸಿಪಿಎಂ ಧುರೀಣರು ಸಹಾನುಭೂತಿಯ ಧ್ವನಿಯಿಂದ ಮಾತನಾಡಿರುವುದು ಇದೇ ಮೊದಲ ಬಾರಿ.
ತಸ್ಲೀಮಾ ಅವರನ್ನು ಅನೇಕ ಬಾರಿ ಭೇಟಿ ಮಾಡಿರುವುದಾಗಿ ನೆನಪಿಸಿಕೊಂಡ ಅವರು, ಅವರು ಕೋಲ್ಕತಾದ ಹೊರಗೆ ವಾಸ್ತವ್ಯ ಹೂಡಿರುವುದರಿಂದ ಅವರಿಗೆ ನಿರಾಶೆಯಾಗಿರುವ ವಿಷಯ ಪತ್ರಿಕೆಗಳಲ್ಲಿ ತಿಳಿದಿದ್ದೇನೆ. ಈಗ ಕೇಂದ್ರ ಸರ್ಕಾರ ಏನು ಹೇಳುತ್ತದೆಂದು ನೋಡುವುದಾಗಿ ಬಸು ಹೇಳಿದರು.
ತಸ್ಲೀಮಾ ಅವರ ದ್ವಿಕಾಂಡಿತೊ ಪುಸ್ತಕವನ್ನು ತಾವು ಓದಿರುವುದಾಗಿ ಹೇಳಿದ ಅವರು, ರಾಜ್ಯ ಸರ್ಕಾರ ಈ ಕೃತಿಯನ್ನು ಈಗಾಗಲೇ ನಿಷೇಧಿಸಿದೆ. ಪ್ರವಾದಿ ಮೊಹಮದ್ ಮತ್ತು ಕುರಾನ್ ಬಗ್ಗೆ ಅವರ ಬರೆಹ ಯಾರೇ ಮುಸ್ಲಿಮರು ಸ್ವೀಕರಿಸುವಂತಹದ್ದಲ್ಲ ಎಂದು ಅವರು ನುಡಿದರು. ಆದರೆ ಹಿಂಸಾಚಾರನಿರತರನ್ನು ಕೂಡ ಅವರು ಟೀಕಿಸದೇ ಬಿಡಲಿಲ್ಲ. ಹಿಂಸಾಚಾರನಿರತರು ಜನರನ್ನು ಕೊಲ್ಲುವುದರಿಂದ ದೇವರ ಸಮೀಪಕ್ಕೆ ಹೋದೆವೆಂದು ಭಾವಿಸುತ್ತಾರೆಯೇ ಎಂದು ಅವರು ಪ್ರಶ್ನಿಸಿದರು.
|