ದೆಹಲಿಯ ಅಕ್ಷರಧಾಮ ಮಂದಿರವು ವಿಶ್ವದ ಅತಿ ದೊಡ್ಡ ಹಿಂದೂ ಮಂದಿರ ಸಂಕೀರ್ಣವಾಗಿ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದೆ.
ಅಕ್ಷರಧಾಮ ಸ್ವಾಮಿನಾರಾಯಣ ಸಂಸ್ಥಾನದ ಪ್ರಮುಖ್ ಸ್ವಾಮಿ ಮಹಾರಾಜ್ ಅವರಿಗೆ ಕಳೆದ ವಾರ ಭಾರತಕ್ಕೆ ಆಗಮಿಸಿದ್ದ ಗಿನ್ನಿಸ್ ವಿಶ್ವದಾಖಲೆ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಎರಡು ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದ್ದಾರೆ.
ಗಿನ್ನಿಸ್ ವಿಶ್ವದಾಖಲೆ ಮುಖ್ಯ ವ್ಯವಸ್ಥಾಪನಾ ಸಮಿತಿಯ ಹಿರಿಯ ಸದಸ್ಯ ಮೈಕೆಲ್ ವಿಟ್ಟಿ ಅವರು ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸ್ಥಾನ (ಬಿಎಪಿಎಸ್)ಕ್ಕೆ ಎರಡು ವಿಭಾಗದ ದಾಖಲೆ ಪತ್ರಗಳನ್ನು ನೀಡಿದರು. ಅವುಗಳಲ್ಲೊಂದು ಒಬ್ಬನೇ ವ್ಯಕ್ತಿಯಿಂದ ಹಲವಾರು ಹಿಂದೂ ಮಂದಿರಗಳ ಪವಿತ್ರೀಕರಣದ ದಾಖಲೆ ಮತ್ತು ಇನ್ನೊಂದು ವಿಶ್ವದ ಅತಿದೊಡ್ಡ ಸಮಗ್ರ ಹಿಂದೂ ಮಂದಿರ ಎಂಬ ದಾಖಲೆ.
ಸ್ವಾಮಿನಾರಾಯಣ ಸಂಸ್ಥಾನದ ಮುಖ್ಯಸ್ಥರಾಗಿರುವ ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಅಂತಾರಾಷ್ಟ್ರೀಯ ಮಟ್ಟದ ಅತ್ಯಂತ ಪೂಜನೀಯ ಧಾರ್ಮಿಕ ಮುಂದಾಳು. ಅವರು 1971ರ ಏಪ್ರಿಲ್ ಮತ್ತು 2007ರ ನವೆಂಬರ್ ನಡುವೆ ವಿಶ್ವದಾಖಲೆಯ 713 ಮಂದಿರಗಳನ್ನು ಐದು ಖಂಡಗಳಲ್ಲಿ ಹಿಂದೂ ವಿಧಿಗಳ ಪ್ರಕಾರವಾಗಿ ಸಂಸ್ಥಾಪಿಸಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.
ಅವುಗಳಲ್ಲಿ, ಅತ್ಯಂತ ಅದ್ಭುತ ಶಿಲ್ಪಕಲಾ ವೈಭವವಿರುವ, ಕರಕುಶಲ ಕೆತ್ತನೆಯ ಪ್ರತೀಕವಾಗಿರುವ ದೆಹಲಿಯ ಬಿಎಪಿಎಸ್ ಸ್ವಾಮಿ ನಾರಾಯಣ ಅಕ್ಷರಧಾಮವು ವಿಶ್ವದಲ್ಲೇ ಅತಿದೊಡ್ಡ ಹಿಂದೂ ಮಂದಿರ ಸಂಕೀರ್ಣವಾಗಿ ಗುರುತಿಸಿಕೊಂಡಿದೆ ಎಂದು ಅದರಲ್ಲಿ ತಿಳಿಸಲಾಗಿದೆ.
|