ಕ್ರಿಸ್‌ಮಸ್ ಹಬ್ಬದ ದಿನದಂದೇ ಹಿಂದೂ ಧಾರ್ಮಿಕ ಗುಂಪುಗಳು ಕ್ರೈಸ್ತರ ಜತೆ ಘರ್ಷಣೆಗೆ ಇಳಿದಿದ್ದರಿಂದ ಒರಿಸ್ಸಾದ ಕಂದಮಾಲ್ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಇನ್ನೂ ನೆಲೆಸಿದೆ. ಫುಲ್ಬಾನಿ, ಬಾಲಿಗುಡ, ದರಿಂಗಿಬಡಿ ಮತ್ತು ಗಾವೋನ್ ಪ್ರದೇಶಗಳಲ್ಲಿ ಅನಿರ್ದಿಷ್ಟ ಕರ್ಫ್ಯೂ ಇನ್ನೂ ಜಾರಿಯಲ್ಲಿದ್ದು, ಮತ್ತೆ ಹಿಂಸಾಚಾರದ ಘಟನೆಗಳು ನಡೆದ ವರದಿಯಾಗಿದೆ.
ಅಬ್ರಹಾಂ ಹೊರಗೆ ನಾಲ್ಕು ಮನೆಗಳಿಗೆ ಅಗ್ನಿಸ್ಪರ್ಶ ಮಾಡಲಾಗಿದೆ ಮತ್ತು ಜಲೇಶ್‌ಪಟದಲ್ಲಿ ಇನ್ನೂ 6 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರಕ್ಷುಬ್ಧಪೀಡಿತ ಪ್ರದೇಶಗಳಿಗೆ ಹೆಚ್ಚುವರಿ ಪಡೆಗಳನ್ನು ಕಳಿಸಲಾಗಿದೆ. ವಿಎಚ್‌ಪಿ ನಾಯಕ ಲಕ್ಷ್ಮಣಾನಂದ ಸರಸ್ವತಿ ಮತ್ತು ಮತಾಂತರ ವಿರೋಧಿ ಪ್ರಮುಖ ಕಾರ್ಯಕರ್ತರ ಮೇಲೆ ಸೋಮವಾರ ಹಲ್ಲೆ ಮಾಡಿದ ಬಳಿಕ ಪರಿಸ್ಥಿತಿ ಹಿಂಸಾಸ್ವರೂಪಕ್ಕೆ ತಿರುಗಿತ್ತು.
ಕೆಲವು ಸರ್ಕಾರೇತಕ ಸಂಸ್ಥೆಗಳ ಕಚೇರಿ, ಮನೆಗಳು ಮತ್ತು ಚರ್ಚ್‌ಗಳ ಮೇಲೆ ವ್ಯಾಪಕ ದಾಳಿಗಳಿಗೆ ಸಾಕ್ಷಿಯಾದ ಕರ್ಫ್ಯೂ ಪೀಡಿತ ಪ್ರದೇಶಗಳಲ್ಲಿ ಸಿಆರ್‌ಪಿಎಫ್, ಅರೆಮಿಲಿಟರಿ ಪಡೆಗಳು ಮತ್ತು ಕ್ಷಿಪ್ರ ಕಾರ್ಯ ಪಡೆಗಳು ಗಸ್ತು ಕಾಯುತ್ತಿವೆ.
ಮುನ್ನೆಚ್ಚರಿಕೆ ಕ್ರಮವಾಗಿ ಫಿರಿಂಜಿಯಾ,ಟಿಕಾಬಾಲಿ, ಉದಯಗಿರಿ ಮತ್ತು ರೈಕಿಯದಲ್ಲಿ ನಿಷೇಧಾಜ್ಞೆ ಜಾರಿಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸಿಪಿಎಂ ಅಲ್ಪಸಂಖ್ಯಾತರು ಮತ್ತು ಅವರ ಸಂಸ್ಥೆಗಳ ಮೇಲೆ ದಾಳಿಯನ್ನು ಖಂಡಿಸಿದೆ.
|